

ಪಡುಬಿದ್ರಿ: ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ಕಸಕಡ್ಡಿಯಿಂದ ತುಂಬಿ ಹೋಗಿದ್ದ ಪಲಿಮಾರು ಶಾಂಭವಿ ನದಿ ಅಣೆಕಟ್ಟೆಯನ್ನು ಗ್ರಾಮಾಡಳಿತದ ನೇತೃತ್ವದಲ್ಲಿ ಸ್ವಚ್ಛಗೊಳಿಸಲಾಗಿದೆ.
ಅಣೆಕಟ್ಟೆಗೆ ಇತ್ತೀಚೆಗೆ ಭೇಟಿ ನೀಡಿದ್ದ ತಹಸೀಲ್ದಾರ್ ಪ್ರತಿಭಾ ಆರ್. ಕಸಕಡ್ಡಿಗಳ ತೆರವಿಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಪ್ರತಿ ವರ್ಷವೂ ಕಸಕಡ್ಡಿ ತುಂಬಿದಾಗ ಗ್ರಾಪಂ ತೆರವು ಮಾಡಿ ಸರಾಗವಾಗಿ ನೀರು ಹರಿಯಲು ಕ್ರಮವಹಿಸುತ್ತಿತ್ತು. ತಹಸೀಲ್ದಾರ್ ಭೇಟಿ ಬಳಿಕ ಕಾರ್ಯಪ್ರವೃತ್ತರಾದ ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ ಪೈ ಹಾಗೂ ಸದಸ್ಯರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ.
ತ್ವರಿತವಾಗಿ ಸ್ಪಂದಿಸಿದ ಪಲಿಮಾರು ಗ್ರಾಮಾಡಳಿತ ಕಾರ್ಯವೈಖರಿ ಶ್ಲಾಘಿಸಿರುವ ತಹಸೀಲ್ದಾರ್, ಮಳೆಗಾಲಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯಿತಿಗಳಿಗೆ ತಿಳಿಸಲಾಗಿದೆ. ನೆರೆ ಭೀತಿ ಇರುವ ಕಡೆ ಈಗಾಗಲೇ ಜನರಿಗೆ ಜಾಗೃತಿ ಮೂಡಿಸಿ ಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.