

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಪರಮಾತ್ಮನ ಅನುಹ್ರಗವಿದ್ದರೆ ಅಸಾಧ್ಯವಾದ ಕೆಲಸವೂ ಸಾಧ್ಯ. ವೆಂಕಟರಮಣನ ದಯದಿಂದ ಅತ್ಯಲ್ಪ ಅವಧಿಯಲ್ಲಿ ಭವ್ಯ ಸಭಾ ಭವನ ನಿರ್ಮಿಸಲು ಸಾಧ್ಯವಾಯಿತು. ದೇವರ ಅನುಗ್ರಹವನ್ನು ಸಂಪಾದಿಸುವುದು ಕಷ್ಟದ ಕೆಲಸ. ಅನುಗ್ರಹ ಪ್ರಾಪ್ತಿಯಾದರೆ ಅದು ಶಾಶ್ವತ. ಗುರುವಿಗೆ ನಾವು ಗುಲಾಮನಾಗಿರಬೇಕು ಇದರಿಂದ ಮುಕ್ತಿ ದೊರಕುತ್ತದೆ ಎಂದು ಕಾಶಿ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಹರಿಖಂಡಿಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿಯ ಸವಿನೆನಪಿಗಾಗಿ ನಿರ್ಮಿಸಲಾದ ಶ್ರೀ ಸುಧೀಂದ್ರತೀರ್ಥ ಸಭಾಭವನ ಮತ್ತು ಶ್ರೀ ಸಂಸ್ಥಾನ ದೇವರ ಪೂಜಾಗೃಹವನ್ನು ಬುಧವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಸುಧೀಂದ್ರತೀರ್ಥರ ಬೃಹತ್ ಭಾವಚಿತ್ರ ಅನಾವರಣಗೊಳಿಸಲಾಯಿತು. ಆಡಳಿತ ಮೊಕ್ತೇಸರ ಎಂ.ದಿನೇಶ್ ಪೈ ಮಾತನಾಡಿ, ಸುಧೀಂದ್ರತೀರ್ಥರ ಜನ್ಮ ಶತವಾನೋತ್ಸವ ಸಂದರ್ಭ ಸಭಾಭವನ ನಿರ್ಮಿಸಿರುವುದು ಸಂತೋಷ. ದೇವರ ದಯೆ, ಸ್ವಾಮೀಜಿ ಆಶೀರ್ವಾದದಿಂದ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.
ಸ್ವಾಮೀಜಿಯನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಈ ಸಂದರ್ಭ ಶ್ರೀ ಸುಧೀಂದ್ರ ತೀರ್ಥ ಕಲಾಮಂದಿರ ಜೀರ್ಣೋದ್ಧಾರ ಮಂಡಳಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಮಂಡಳಿ ಸದಸ್ಯರು, ಅರ್ಚಕರು, ಶ್ರೀ ಲಕ್ಷ್ಮೀವೆಂಕಟರಮಣ ಮಹಿಳಾ ಮಂಡಳಿ, ಯುವಕ ಮಂಡಲ, ಭಜನಾ ಮಂಡಳಿಯವರು, ಭಕ್ತರು ಉಪಸ್ಥಿತರಿದ್ದರು.