ಹೆಬ್ರಿ ತಾಲೂಕು ಆಡಳಿತ ಕಚೇರಿಯಲ್ಲಿ ಸಮಸ್ಯೆ

hebri (2)
Published on

ನರೇಂದ್ರ ಎಸ್.ಮರಸಣಿಗೆ

ಹೆಬ್ರಿ ತಾಲೂಕಿನ ತಾಲೂಕು ಆಡಳಿತ ಕಚೇರಿಯಲ್ಲಿ ವಿದ್ಯುತ್ ಕಡಿತವಾದರೆ ಎಲ್ಲ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಪರ್ಯಾಯ ವ್ಯವಸ್ಥೆಯಾಗಿ ಇನ್ವರ್ಟರ್ ಇಲ್ಲದೆ ಯಾವುದೇ ಸೇವೆಗಳನ್ನು ನೀಡಲಾಗುತ್ತಿಲ್ಲ. ಇರುವ ಜನರೇಟರ್ ಉಪಯೋಗಕ್ಕಿಲ್ಲವಾಗಿದೆ. ನಿತ್ಯ ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಬರುವ ಜನರು ಕಾದುಕಾದು ಸುಸ್ತಾಗಿ ವಾಪಸ್ ಹೋಗುವಂತಾಗಿದೆ.

ಮಳೆಗಾಲವಾದ್ದರಿಂದ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತದೆ. ಆಗಾಗ ಕರೆಂಟ್ ಹೋಗುವುದು ಮಾತ್ರವಲ್ಲದೆ ಬಹುತೇಕ ಮಂಗಳವಾರದಂದು ದಿನವಿಡೀ ವಿದ್ಯುತ್ ಇರುವುದಿಲ್ಲ. ವಿಎ ಕಚೇರಿ, ಕಂದಾಯ ನಿರೀಕ್ಷಕರ ಕಚೇರಿ, ಅಟಲ್ ಜಿ ಹಾಗೂ ನಾಡಕಚೇರಿಗಳಲ್ಲಿ ಕರೆಂಟ್ ಹೋದರೆ ಸೇವೆ ನೀಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ಸಕಾಲದಲ್ಲಿ ಕೆಲಸಗಳು ನಡೆಯದೆ ಸಮಸ್ಯೆ ಎದುರಾಗಿದೆ.

ಗ್ರಾಮ ಆಡಳಿತ ಅಧಿಕಾರಿಗಳಿಗೆ ತೊಂದರೆ

ತಾಲೂಕು ಕಚೇರಿಯ ಕೊಂಡಿಯಂತೆ ಕೆಲಸ ಮಾಡುವ ಪ್ರಮುಖ ಕೆಲಸಗಳನ್ನು ನಿರ್ವಹಿಸುವ ಗ್ರಾಮ ಆಡಳಿತ ಕಚೇರಿಗೆ ಇನ್ವರ್ಟರ್ ವ್ಯವಸ್ಥೆ ಇಲ್ಲದಿರುವುದು ದುರಂತವೇ ಸರಿ. ಇದರಿಂದಾಗಿ ಬಹಳಷ್ಟು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಬೇಕೆಂಬ ಟಾರ್ಗೆಟ್ ಇದ್ದರೂ ಕರೆಂಟ್ ಸಮಸ್ಯೆಯಿಂದ ಹಿನ್ನಡೆ ಉಂಟಾಗಿದೆ.

ಅಸಮರ್ಪಕ ಸ್ವಿಚ್‌ಗಳು

ತಾಲೂಕು ಆಡಳಿತ ಕಚೇರಿ ಉದ್ಘಾಟನೆಗೊಂಡು ಸುಮಾರು ಐದು ವರ್ಷ ಕಳೆದಿದೆ. ಇಷ್ಟಾದರೂ ಸಮರ್ಪಕವಾಗಿ ಸ್ವಿಚ್ ಬೋರ್ಡ್‌ಗಳನ್ನು ಅಳವಡಿಕೆ ಮಾಡಿಲ್ಲ.

ಕತ್ತಲು, ಸೆಕೆಯಲ್ಲೇ ಕುಳಿತುಕೊಳ್ಳಬೇಕು

ಕರೆಂಟ್ ಹೋದರೆ ಒಂದು ಕಡೆ ಕತ್ತಲು, ಮತ್ತೊಂದೆಡೆ ಸೆಕೆಯಲ್ಲೇ ಸಿಬ್ಬಂದಿ ಕುಳಿತುಕೊಳ್ಳಬೇಕಾದ ದುಸ್ಥಿತಿ ಎದುರಾಗಿದೆ. ವ್ಯವಸ್ಥೆಗಳಿದ್ದರೂ ಸಕಾರಾತ್ಮಕ ಸ್ಪಂದನೆಗಳಿಲ್ಲದಿರುವುದು ಇದಕ್ಕೆ ಕಾರಣವಾಗಿದೆ. ನಾಡಕಚೇರಿ, ಅಟಲ್ ಜಿ ಕಚೇರಿಯಲ್ಲಿ ಜನಜಂಗುಳಿ ಇದ್ದರೂ ತಾಲೂಕು ಆಡಳಿತ ಕಚೇರಿ ಸೂಕ್ತ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದೆ.

ಜನರೇಟರ್ ಇದ್ದರೂ, ಸೇವೆ ಇಲ್ಲ

ತಾಲೂಕು ಕಚೇರಿಯಲ್ಲಿ ಜನರೇಟರ್ ಇದ್ದರೂ, ಅದರ ಸೇವೆಗೆ ವ್ಯವಸ್ಥೆ ಇಲ್ಲ ಎಂದು ಸಿಬ್ಬಂದಿ ಅಳಲನ್ನು ತೋಡಿಕೊಂಡಿದ್ದಾರೆ. ಜನರೇಟರ್‌ಗೆ ಡೀಸೆಲ್ ಹಾಕಲು ಅನುದಾನ ಕೊರತೆ ಇದೆ ಎಂಬ ಕಾರಣ ನೀಡಲಾಗುತ್ತಿದೆ. ವಿದ್ಯುತ್ ಹೋದಾಗ ಬದಲಿ ವ್ಯವಸ್ಥೆ ಮಾಡಲು ಇರುವ ಸಮಸ್ಯೆ ಬಗ್ಗೆ ಹೆಬ್ರಿ ತಹಸೀಲ್ದಾರ್ ಜೊತೆ ಮಾತುಕತೆ ನಡೆಸುತ್ತೇನೆ. ಸೌಲಭ್ಯ ಕಲ್ಪಿಸಲು ಅನುದಾನಗಳು ಬಂದಾಗ ಅದು ಏನಾಗಿದೆ ಎಂದು ತಿಳಿದುಕೊಳ್ಳುತ್ತೇನೆ. ಈ ಬಗ್ಗೆ ಶೀಘ್ರ ಸಮರ್ಪಕ ಕ್ರಮ ಜರುಗಿಸುತ್ತೇನೆ. - ಡಾ.ಕೆ.ವಿದ್ಯಾಕುಮಾರಿ, ಉಡುಪಿ ಜಿಲ್ಲಾಧಿಕಾರಿ https://www.vijayavani.net/installation-of-the-idol-of-goddess-durga-parameshwari-in-varali https://www.vijayavani.net/nature-conservation-is-a-social-responsibility

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net