

ನವದೆಹಲಿ: ಭಾರತ ಕೋವಿಡ್ 19 ವಿರುದ್ಧ ಹೋರಾಡುತ್ತಿದ್ದರೆ ಪಾಪಿ ಪಾಕಿಸ್ತಾನ ಭಾರತದ ಮೇಲೆ ಉಗ್ರರನ್ನು ಛೂ ಬಿಡಲು ಯೋಜನೆಗಳನ್ನು ರೂಪಿಸುತ್ತಿದೆ. ಪಾಕ್ನಲ್ಲಿ ಅಡಗಿ ಕುಳಿತಿರುವ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ಈ ಕಾರ್ಯದಲ್ಲಿ ಅದರೊಂದಿಗೆ ಕೈ ಜೋಡಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಆದರೆ ಈ ದಾಳಿಯಲ್ಲಿ ಪಾಕ್ ಮೂಲದ ಭಯೋತ್ಪಾದನೆ ಸಂಘಟನೆಗಳು ಉಗ್ರರು ಯಾರೂ ನೇರವಾಗಿ ಪಾಲ್ಗೊಳ್ಳುತ್ತಿಲ್ಲ. ಬದಲಿಗೆ ಭಾರತದಲ್ಲಿರುವ ಭೂಗತಪಾತಕಿ ದಾವೂದ್ ಇಬ್ರಾಹಿಂನ ತಂಡದ ಸದಸ್ಯರನ್ನು ಆ ಸಂಘಟನೆಗಳು ಬಳಸಿಕೊಳ್ಳಲಿರುವುದು ವಿಶೇಷವಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 2019ರಲ್ಲಿ 370ನೇ ವಿಧಿಯನ್ನು ಜಾರಿಗೊಳಿಸಿದ ನಂತರದಲ್ಲಿ ಯಾವುದೇ ಪ್ರಮುಖ ದಾಳಿ ಸಂಘಟಿಸಲು ಪಾಕ್ನ ಬೇಹುಗಾರಿಕಾ ಪಡೆ ಐಎಸ್ಐಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಹತಾಶಗೊಂಡಿರುವ ಅದು, ಶತಾಯಗತಾಯ ಭಾರತದಲ್ಲಿ ಭಾರಿ ದಾಳಿಯನ್ನು ಸಂಘಟಿಸಲು ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಭಯೋತ್ಪಾದನಾ ಸಂಘಟನೆ ಉಗ್ರರು ದಾವೂದ್ ಜತೆಗೂಡಿ 26/11ರ ಮುಂಬೈ ಮೇಲಿನ ಉಗ್ರರ ದಾಳಿಯ ರೀತಿಯ ಮತ್ತೊಂದು ದಾಳಿ ಸಂಘಟಿಸಲು ಯೋಜನೆ ರೂಪಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ ಎಂದು ಗುಪ್ತಚರ ವರದಿಗಳು ತಿಳಿಸಿವೆ.
ಇಸ್ಲಾಮಾಬಾದ್ನಲ್ಲಿರುವ ಪಾಕ್ನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಮನೆಯ ಪಕ್ಕದಲ್ಲಿರುವ ದಾವೂದ್ನ ಫಾರ್ಮ್ಹೌಸ್ನಲ್ಲಿ ಭೂಗತಪಾತಕಿ ಹಾಗೂ ಲಷ್ಕರ್ನ ಪ್ರಮುಖ ಉಗ್ರರು ಸಭೆ ನಡೆಸಿದರು ಎನ್ನಲಾಗಿದೆ. ಪಾಕಿಸ್ತಾನದ ಬೇಹುಗಾರಿಕಾ ಪಡೆ ಐಎಸ್ಐನ ಕೆಲ ಅಧಿಕಾರಿಗಳು ಹಾಗೂ ಅಂಗರಕ್ಷಕ ಪಡೆಯೊಂದಿಗೆ ದಾವೂದ್ ಸಭೆಗೆ ಬಂದಿದ್ದ ಎಂದು ಗುಪ್ತಚರ ಮಾಹಿತಿಗಳು ತಿಳಿಸಿವೆ.
ಸಭೆಯಲ್ಲಿ ಆದ ಚರ್ಚೆಗಳ ಬಗ್ಗೆ ಕೆಲವೊಂದು ಸೂಕ್ಷ್ಮ ಮಾಹಿತಿಗಳು ಲಭಿಸಿದ್ದು, ಭಾರತೀಯ ಭದ್ರತಾ ಪಡೆ ಸಿಬ್ಬಂದಿ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಮಗ್ನರಾಗಿರುವಾಗಲೇ ದಾಳಿಗಳನ್ನು ಸಂಘಟಿಸಿ, ಧಾರ್ಮಿಕ ಸೌಹಾರ್ದತೆ ಕದಡಬೇಕು ಎಂಬುದು ಐಎಸ್ಐನ ಪ್ರಮುಖ ಧ್ಯೇಯವಾಗಿದೆ. ಇದಕ್ಕೆ ಪೂರಕವಾಗಿ ಲಷ್ಕರ್ ಉಗ್ರರು ಗುಜರಾತ್ ಆಥವಾ ಮಹಾರಾಷ್ಟ್ರಕ್ಕೆ ಸಮುದ್ರ ಮಾರ್ಗದಲ್ಲಿ ಶಸ್ತ್ರಾಸ್ತ್ರಗಳನ್ನು ರವಾನಿಸಲಿದ್ದಾರೆ.
ಈ ಕುಟಿಲ ತಂತ್ರಗಾರಿಕೆಯನ್ನು ನಿರ್ಧರಿಸುವ ಸಲುವಾಗಿ ಲಷ್ಕರ್ನ ಎರಡನೇ ಹಂತದ ಪ್ರಮುಖ ಉಗ್ರ ಅಬ್ದುಲ್ ರೆಹಮಾನ್ ಮಕ್ಕಿ ಇತ್ತೀಚೆಗೆ ಕರಾಚಿಗೆ ತೆರಳಿದ್ದಲ್ಲದೆ, ದಾವೂದ್ನನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದ ಎಂದು ಹೇಳಲಾಗಿದೆ.
ತಾವು ತಲುಪಿಸುವ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ದಾಳಿಗಳನ್ನು ಸಂಘಟಿಸುವಂತೆ ತಮ್ಮ ಭೂಗತ ತಂಡದ ಸದಸ್ಯರಿಗೆ ಸೂಚಿಸುವಂತೆ ಉಗ್ರ ಸಂಘಟನೆಗಳು ದಾವೂದ್ಗೆ ಸೂಚಿಸಿವೆ ಎನ್ನಲಾಗಿದೆ.