

ದೇಶಾದ್ಯಂತ ಸದ್ಯ ಲಾಕ್ಡೌನ್ ಜಾರಿಯಲ್ಲಿದೆ. ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಈ ನಡುವೆ ಕೆಲ ನಿರ್ಬಂಧಗಳನ್ನು ಸಡಿಸಲಿಸಿದ ಕಾರಣ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವಂತೆ ಎಲ್ಲ ಶಾಲೆಗಳಿಗೆ ಸೂಚಿಸಲಾಗಿದೆ.
ಆದರೆ, ಪಾಠದ ಗತಿಯೇನು? ದೂರದರ್ಶನದಲ್ಲಿ ಪಾಠಗಳನ್ನು ಬಿತ್ತರಿಸಲಾಗುತ್ತಿದೆಯಾದರೂ, ಆ ಸಮಯಕ್ಕೆ ಹೇಳಿದ್ದನ್ನು ಕೇಳಿಕೊಂಡು ಸುಮ್ಮನಾಗಬೇಕಷ್ಟೇ ಎಂದು ವಿದ್ಯಾರ್ಥಿಗಳು ಅಲವತ್ತುಕೊಳ್ಳುತ್ತಿದ್ದಾರೆ.
ಇದರ ನಡುವೆಯೇ ಎಲ್ಲರಿಗೂ ಎಟುಕುವ ವಿನೂತನ ಪರಿಕಲ್ಪನೆಯನ್ನು ಜಾರಿಗೊಳಿಸಿದೆ ಮಧ್ಯಪ್ರದೇಶ ಸರ್ಕಾರ. ಕಲಿಕೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದೆ. ಕಳೆದ ಒಂದು ತಿಂಗಳಿನಿಂದ ಹೈಸ್ಕೂಲ್ ಮಕ್ಕಳಿಗೆ ವಾಟ್ಸ್ಆ್ಯಪ್ ಮೂಲಕ ಪಾಠ ಹೇಳುತ್ತಿದೆ.
ಇಂದೋರ್ ವಲಯದಲ್ಲಿ 727 ಸರ್ಕಾರಿ ಪ್ರೌಢಶಾಲೆಗಳು ಹಾಗೂ 645 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಈ ಎಲ್ಲ ಶಾಲೆಗಳಲ್ಲಿ 1,367 ವಾಟ್ಸ್ಆ್ಯಪ್ ಗ್ರೂಪ್ಗಳನ್ನು ರಚಿಸಲಾಗಿದೆ. ಇದರಲ್ಲಿ ಒಟ್ಟು 1.4 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಕಳೆದ ಒಂದು ತಿಂಗಳಿನಿಂದ ವಾಟ್ಸ್ಆ್ಯಪ್ ಮೂಲಕ ಕಲಿಕಾ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ. ಇದನ್ನೇ ಖಾಸಗಿ ಶಾಲೆ ವಿದ್ಯಾರ್ಥಿಗಳಿಗೂ ಕಳುಹಿಸಲಾಗುತ್ತಿದೆ. ಖಾಸಗಿ ವಲಯದ 1.2 ಲಕ್ಷ ವಿದ್ಯಾರ್ಥಿಗಳು ಕೂಡ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ 5,888 ವಾಟ್ಸ್ಆ್ಯಪ್ ಗ್ರೂಪ್ಗಳನ್ನು ರಚಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಇಂದೋರ್ ವಲಯದ ಜಂಟಿ ನಿರ್ದೇಶಕ ಮನೀಷ್ ವರ್ಮಾ ಮಾಹಿತಿ ನೀಡಿದ್ದಾರೆ.
ಆದರೆ, ಇದರಲ್ಲೂ ಒಂದು ಕೊರತೆಯಿದೆ. ಈ ವಾಟ್ಸ್ಆ್ಯಪ್ ಗ್ರೂಪ್ಗಳ ಮೂಲಕ ಶೇ.65 ವಿದ್ಯಾರ್ಥಿಗಳನ್ನಷ್ಟೇ ತಲುಪಲು ಸಾಧ್ಯವಾಗುತ್ತಿದೆಯಂತೆ. ಇನ್ನುಳಿದವರಿಗಾಗಿ ಸ್ಥಳೀಯ ಕೇಬಲ್ ವಾಹಿನಿಗಳು, ದೂರದರ್ಶನದ ಮೂಲಕ ಪಾಠ ತಲುಪುವಂತೆ ಮಾಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.