

Golden Temple : ಭಾರತವು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಸ್ಥಳಗಳಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ, ಪಂಜಾಬ್‌ನ ಅಮೃತಸರದಲ್ಲಿರುವ ಸ್ವರ್ಣ ಮಂದಿರವನ್ನು ಗುರಿಯಾಗಿಸಿಕೊಂಡು ಪಾಕ್ ಸೇನೆಯು ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಿತ್ತು. ಆದರೆ, ಭಾರತೀಯ ಸೇನೆ, ಪಾಕ್ ದಾಳಿಯನ್ನು ವಿಫಲಗೊಳಿಸಿತು. ಈ ರೋಚಕ ರಕ್ಷಣಾ ಕಾರ್ಯಾಚರಣೆಯ ಬಗ್ಗೆ 15ನೇ ಪದಾತಿ ದಳದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ ಕಾರ್ತಿಕ್ ಸಿ ಶೇಷಾದ್ರಿ ಅವರು ವಿವರಿಸಿದ್ದಾರೆ.
ಭಾರತೀಯ ಸೇನೆಯ ಏರ್ ಡಿಫೆನ್ಸ್ ಗನ್ನರ್‌ಗಳು ಸುವರ್ಣ ಮಂದಿರವನ್ನು ಗುರಿಯಾಗಿಸಿಕೊಂಡಿದ್ದ ಪಾಕಿಸ್ತಾನದ ಎಲ್ಲಾ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿತು ಎಂದು ಶೇಷಾದ್ರಿ ಅವರು ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನ ಸೇನೆಯು ಭಾರತೀಯ ಮಿಲಿಟರಿ ಶಿಬಿರಗಳು, ಧಾರ್ಮಿಕ ಸ್ಥಳಗಳು ಸೇರಿದಂತೆ ನಾಗರಿಕರ ನೆಲೆಗಳನ್ನು ಗುರಿಯಾಗಿಸಿಕೊಳ್ಳುತ್ತಾರೆ ಎಂದು ನಾವು ಮೊದಲೇ ನಿರೀಕ್ಷಿಸಿದ್ದೆವು. ಇವುಗಳಲ್ಲಿ, ಗೋಲ್ಡನ್ ಟೆಂಪಲ್ ಅತ್ಯಂತ ಪ್ರಮುಖವಾದದ್ದು. ಹೀಗಾಗಿ, ಗೋಲ್ಡನ್ ಟೆಂಪಲ್‌ಗೆ ಸಮಗ್ರ ವಾಯು ರಕ್ಷಣಾ ಛತ್ರಿಯ ಹೊದಿಕೆಯನ್ನು ನೀಡಲು ನಾವು ಹೆಚ್ಚುವರಿ ಆಧುನಿಕ ವಾಯು ರಕ್ಷಣಾ ಸ್ವತ್ತುಗಳನ್ನು ಸಜ್ಜುಗೊಳಿಸಿದ್ದೆವು ಎಂದು ಶೇಷಾದ್ರಿ ಹೇಳಿದರು.
ಮೇ 8ರಂದು ಪಾಕಿಸ್ತಾನ, ಮಾನವರಹಿತ ವೈಮಾನಿಕ ಶಸ್ತ್ರಾಸ್ತ್ರಗಳು, ಮುಖ್ಯವಾಗಿ ಡ್ರೋನ್‌ಗಳು ಮತ್ತು ದೀರ್ಘ-ಶ್ರೇಣಿಯ ಕ್ಷಿಪಣಿಗಳನ್ನು ಬಳಸಿಕೊಂಡು ಬೃಹತ್ ವಾಯುದಾಳಿ ನಡೆಸಿತು. ಆದರೆ, ನಾವು ಮೊದಲೇ ಇದನ್ನು ನಿರೀಕ್ಷೆ ಮಾಡಿದ್ದರಿಂದ ಸಂಪೂರ್ಣ ಸಿದ್ಧರಾಗಿದ್ದೆವು ಮತ್ತು ನಮ್ಮ ಧೈರ್ಯಶಾಲಿ ಹಾಗೂ ಜಾಗರೂಕ ಸೇನಾ ವಾಯು ರಕ್ಷಣಾ ಗನ್ನರ್‌ಗಳು ಪಾಕಿಸ್ತಾನ ಸೇನೆಯ ದುಷ್ಟ ಯೋಜನೆಗಳನ್ನು ವಿಫಲಗೊಳಿಸಿದರು ಮತ್ತು ಗೋಲ್ಡನ್ ಟೆಂಪಲ್ ಅನ್ನು ಗುರಿಯಾಗಿಸಿಕೊಂಡಿದ್ದ ಎಲ್ಲ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದರು. ಹೀಗಾಗಿ ನಮ್ಮ ಪವಿತ್ರ ಸುವರ್ಣ ಮಂದಿರದ ಮೇಲೆ ಒಂದು ಗೀರು ಕೂಡ ಬೀಳಲು ಅವಕಾಶ ನೀಡಲಿಲ್ಲ ಎಂದು ಶೇಷಾದ್ರಿ ಹೇಳಿದರು.
ಆಕಾಶ್ ಕ್ಷಿಪಣಿ ವ್ಯವಸ್ಥೆ, ಎಲ್ -70 ಏರ್ ಡಿಫೆನ್ಸ್ ಗನ್ಸ್ ಸೇರಿದಂತೆ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ಅಮೃತಸರದ ಸ್ವರ್ಣ ದೇವಾಲಯ ಮತ್ತು ಪಂಜಾಬ್ ನಗರಗಳನ್ನು ಪಾಕಿಸ್ತಾನದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದ ಹೇಗೆ ರಕ್ಷಿಸಿದವು ಎಂಬುದರ ಪ್ರದರ್ಶನವನ್ನು ಭಾರತೀಯ ಸೇನೆಯು ಸೋಮವಾರ ಪ್ರದರ್ಶಿಸಿತು.
ಇನ್ನು ಆಪರೇಷನ್ ಸಿಂಧೂರ ಸಮಯದಲ್ಲಿ ಸಶಸ್ತ್ರ ಪಡೆಗಳು ಪಾಕಿಸ್ತಾನದ ಅನೇಕ ಸ್ಥಳಗಳನ್ನು "ಸಂಪೂರ್ಣ ನಿಖರತೆಯೊಂದಿಗೆ" ಗುರಿಯಾಗಿಸಿಕೊಂಡವು. ಭಯೋತ್ಪಾದಕ ಸಂಘಟನೆಗಳ ಪ್ರಧಾನ ಕಚೇರಿಗಳನ್ನು ಹೊಂದಿರುವ ಮುರಿಡ್ಕೆ ಮತ್ತು ಬಹವಾಲ್ಪುರದಂತಹ ಪ್ರದೇಶಗಳ ಮೇಲೆ ದಾಳಿ ನಡೆಸಿದವು ಎಂದು ಮೇಜರ್ ಜನರಲ್ ಶೇಷಾದ್ರಿ ಹೇಳಿದರು.
ಈ ಒಂಬತ್ತು ಗುರಿಗಳಲ್ಲಿ, ಲಾಹೋರ್‌ಗೆ ಸಮೀಪದಲ್ಲಿರುವ ಮುರಿಡ್ಕೆ, ಲಷ್ಕರ್-ಎ-ತೊಯ್ಬಾ ಪ್ರಧಾನ ಕಚೇರಿ ಮತ್ತು ಬಹಾವಲ್ಪುರದಲ್ಲಿರುವ ಜೈಶ್-ಇ-ಮೊಹಮ್ಮದ್ (ಜೆಇಎಂ) ಪ್ರಧಾನ ಕಚೇರಿಯನ್ನು ಹೊಂದಿದೆ. ಇವುಗಳ ಮೇಲೆ ಸಂಪೂರ್ಣ ನಿಖರತೆಯಿಂದ ದಾಳಿ ಮಾಡಲಾಗಿದೆ. ದಾಳಿಯ ನಂತರ, ನಾವು ಯಾವುದೇ ಪಾಕಿಸ್ತಾನಿ ಮಿಲಿಟರಿ ಅಥವಾ ನಾಗರಿಕ ಮೂಲಸೌಕರ್ಯವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸುವ ಹೇಳಿಕೆಯನ್ನು ಸಹ ನೀಡಿದ್ದೇವೆ ಎಂದು ಶೇಷಾದ್ರಿ ಅವರು ಹೇಳಿದರು.
ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು ತಮ್ಮ ಪರಾಕ್ರಮವನ್ನು ಸಾಬೀತುಪಡಿಸಿದವು. ಪಾಕಿಸ್ತಾನವು ಭಾರತದ ಅನೇಕ ನಗರಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮಳೆಗರೆದಿತು ಆದರೆ, ಅವೆಲ್ಲವೂ ಯಶಸ್ವಿಯಾಗಿ ನಾಶವಾದವು ಮತ್ತು ಭಾರತದ ಕಡೆಯಿಂದ ಕನಿಷ್ಠ ಹಾನಿ ಉಂಟಾಯಿತು. ನಾಲ್ಕು ದಿನಗಳ ಕಾಲ ನಡೆದ ದಾಳಿಯ ಸಮಯದಲ್ಲಿ ವಾಯು ರಕ್ಷಣಾ ವ್ಯವಸ್ಥೆಯು ಹಲವಾರು ಡ್ರೋನ್‌ಗಳು, ಕ್ಷಿಪಣಿಗಳು, ಮೈಕ್ರೋ ಯುಎವಿಗಳು ಮತ್ತು ಯುದ್ಧಸಾಮಗ್ರಿಗಳನ್ನು ತಡೆಹಿಡಿಯಿತು, ನಂತರ ಕದನ ವಿರಾಮಕ್ಕೆ ಒಪ್ಪಿಗೆ ನೀಡಲಾಯಿತು ಎಂದು ಶೇಷಾದ್ರಿ ಅವರು ತಿಳಿಸಿದರು. (ಏಜೆನ್ಸೀಸ್)