ಪಾಕಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ ಸಮಬಲಕ್ಕೆ ತೃಪ್ತಿಪಟ್ಟ ಇಂಗ್ಲೆಂಡ್

t20 eng vs pak
Published on

ಮ್ಯಾಂಚೆಸ್ಟರ್: ಕರೊನಾ ಕಾಲದಲ್ಲಿ ಸತತ 4ನೇ ಸರಣಿ ಗೆಲುವು ದಾಖಲಿಸುವ ಹಂಬಲದಲ್ಲಿದ್ದ ಇಂಗ್ಲೆಂಡ್ ತಂಡ ಪ್ರವಾಸಿ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ 1-1 ಸಮಬಲಕ್ಕೆ ತೃಪ್ತಿಪಟ್ಟಿದೆ. ಅನುಭವಿ ಆಟಗಾರ ಮೊಹಮದ್ ಹಫೀಜ್ (86*ರನ್, 52 ಎಸೆತ, 4 ಬೌಂಡರಿ, 6 ಸಿಕ್ಸರ್) ಮತ್ತು ಯುವ ಬ್ಯಾಟ್ಸ್‌ಮನ್ ಹೈದರ್ ಅಲಿ (54 ರನ್, 33 ಎಸೆತ, 5 ಬೌಂಡರಿ, 2 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ ಪಾಕಿಸ್ತಾನ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ 5 ರನ್‌ಗಳಿಂದ ಸೋಲುಣಿಸಿತು. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ತಂಡ, 4 ವಿಕೆಟ್‌ಗೆ 190 ರನ್‌ಗಳ ಬೃಹತ್ ಮೊತ್ತ ಪೇರಿಸಿತು. 39 ವರ್ಷದ ಹಫೀಜ್ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಜೀವನಶ್ರೇಷ್ಠ ಗಳಿಕೆಯನ್ನು ಸರಿಗಟ್ಟಿದರೆ, 19 ವರ್ಷದ ಹೈದರ್ ಅಲಿ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಗಮನಸೆಳೆದರು. ಪ್ರತಿಯಾಗಿ ಇಂಗ್ಲೆಂಡ್ ತಂಡ ಪಾಕ್ ವೇಗಿಗಳ ದಾಳಿಗೆ ಕುಸಿತ ಕಂಡು 8 ವಿಕೆಟ್‌ಗೆ 185 ರನ್ ಗಳಿಸಲಷ್ಟೇ ಶಕ್ತವಾಯಿತು. ಕೊನೇ ಹಂತದಲ್ಲಿ ಮೊಯಿನ್ ಅಲಿ (61ರನ್, 33 ಎಸೆತ, 4 ಬೌಂಡರಿ, 4 ಸಿಕ್ಸರ್) ಮತ್ತು ಸ್ಯಾಮ್ ಬಿಲ್ಲಿಂಗ್ಸ್ (26) ಪ್ರತಿಹೋರಾಟ ನಡೆಸಿದರೂ, ಅನುಭವಿ ವೇಗಿ ವಹಾಬ್ ರಿಯಾಜ್ (26ಕ್ಕೆ 2) ಅವರಿಬ್ಬರಿಗೆ ಕಡಿವಾಣ ಹಾಕಿದರು.

ಈ ಗೆಲುವಿನೊಂದಿಗೆ ಪಾಕಿಸ್ತಾನ ತಂಡ ಪ್ರವಾಸವನ್ನು ಗೆಲುವಿನೊಂದಿಗೆ ಮುಗಿಸಿದ ಸಮಾಧಾನ ಕಂಡರೆ, ಇಂಗ್ಲೆಂಡ್ ತಂಡ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ, ಟಿ20 ಸರಣಿಗೆ ಮುನ್ನ ಹಿನ್ನಡೆ ಕಂಡಿತು. ಇಂಗ್ಲೆಂಡ್ ಈ ಮುನ್ನ ಜೈವಿಕ-ಸುರಕ್ಷಾ ವಾತಾವರಣದಲ್ಲಿ ಆಡಲಾದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್, ಐರ್ಲೆಂಡ್ ವಿರುದ್ಧದ ಏಕದಿನ ಮತ್ತು ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ಗೆಲುವು ದಾಖಲಿಸಿತ್ತು.

ಪಾಕಿಸ್ತಾನ: 4 ವಿಕೆಟ್‌ಗೆ 190 (ಬಾಬರ್ ಅಜಮ್ 21, ಹೈದರ್ ಅಲಿ 54, ಮೊಹಮದ್ ಹಫೀಜ್ 86*, ಶಾದಾಬ್ ಖಾನ್ 15, ಜೋರ್ಡನ್ 29ಕ್ಕೆ 2, ಮೊಯಿನ್ ಅಲಿ 10ಕ್ಕೆ 1, ಟಾಮ್ ಕರ‌್ರನ್ 32ಕ್ಕೆ 1), ಇಂಗ್ಲೆಂಡ್: 8 ವಿಕೆಟ್‌ಗೆ 185 (ಬ್ಯಾಂಟನ್ 46, ಬೇರ್‌ಸ್ಟೋ 0, ಮಲಾನ್ 7, ಮಾರ್ಗನ್ 10, ಮೊಯಿನ್ ಅಲಿ 61, ಬಿಲ್ಲಿಂಗ್ಸ್ 26, ಶಹೀನ್ ಷಾ 28ಕ್ಕೆ 2, ವಹಾಬ್ ರಿಯಾಜ್ 26ಕ್ಕೆ 2, ಇಮಾದ್ ವಾಸಿಂ 35ಕ್ಕೆ 1). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಮೊಹಮದ್ ಹಫೀಜ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net