ಕೆರಿಬಿಯನ್ ಟಿ20 ಲೀಗ್‌ನಲ್ಲಿ ನೈಟ್‌ರೈಡರ್ಸ್‌ಗೆ ಸತತ 7ನೇ ಗೆಲುವು

Trinbago Knight Riders cpl
Published on

ಟರೌಬ (ಟ್ರಿನಿಡಾಡ್): ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಕಾಲಿನ್ ಮನ್ರೊ (65 ರನ್, 54 ಎಸೆತ, 10 ಬೌಂಡರಿ, 1 ಸಿಕ್ಸರ್) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಟ್ರಿನ್‌ಬಾಗೊ ನೈಟ್‌ರೈಡರ್ಸ್‌ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಲೀಗ್‌ನಲ್ಲಿ ಗೆಲುವಿನ ಓಟವನ್ನು ಸತತ 7ನೇ ಪಂದ್ಯಕ್ಕೆ ವಿಸ್ತರಿಸಿದೆ. ಜಮೈಕಾ ತಲ್ಲವಾಹ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಟ್ರಿನ್‌ಬಾಗೋ ನೈಟ್‌ರೈಡರ್ಸ್‌ ತಂಡ 19 ರನ್‌ಗಳಿಂದ ಗೆಲುವು ದಾಖಲಿಸಿ ಸೆಮೀಸ್ ಸ್ಥಾನ ಖಚಿತಪಡಿಸಿಕೊಂಡಿತು. ಗಯಾನಾ ವಾರಿಯರ್ಸ್‌ ತಂಡದ ಸತತ 11 ಗೆಲುವಿನ ಸಿಪಿಎಲ್ ದಾಖಲೆಯತ್ತ ನೈಟ್‌ರೈಡರ್ಸ್‌ ತಂಡ ಈಗ ಗಮನಹರಿಸಿದೆ. ಐಪಿಎಲ್‌ನ ಕೋಲ್ಕತ ನೈಟ್‌ರೈಡರ್ಸ್‌ ತಂಡದ ಮಾಲೀಕರೇ ಟ್ರಿನ್‌ಬಾಗೋ ನೈಟ್‌ರೈಡರ್ಸ್‌ ಒಡೆತನವನ್ನೂ ಹೊಂದಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಕೈರಾನ್ ಪೊಲ್ಲಾರ್ಡ್ ಸಾರಥ್ಯದ ನೈಟ್‌ರೈಡರ್ಸ್‌ ತಂಡ ಸಂಘಟಿತ ಬ್ಯಾಟಿಂಗ್‌ನಿಂದ 4 ವಿಕೆಟ್‌ಗೆ 184 ರನ್ ಪೇರಿಸಿತು. ಪ್ರತಿಯಾಗಿ ಜಮೈಕಾ ತಂಡ ಆಲ್ರೌಂಡರ್ ಆಂಡ್ರೆ ರಸೆಲ್ (50*ರನ್, 23 ಎಸೆತ, 5 ಬೌಂಡರಿ, 4 ಸಿಕ್ಸರ್) ಕೊನೇ ಹಂತದಲ್ಲಿ ತೋರಿದ ಬಿರುಸಿನ ಬ್ಯಾಟಿಂಗ್ ನಿರ್ವಹಣೆಯ ಹೊರತಾಗಿಯೂ 6 ವಿಕೆಟ್‌ಗೆ 165 ರನ್ ಗಳಿಸಲಷ್ಟೇ ಶಕ್ತವಾಯಿತು. ಜಮೈಕಾ ತಂಡಕ್ಕೆ ಇದು ಆಡಿದ 7ನೇ ಪಂದ್ಯದಲ್ಲಿ ಎದುರಾದ 4ನೇ ಸೋಲಾಗಿದೆ.

ಟ್ರಿನ್‌ಬಾಗೋ ನೈಟ್‌ರೈಡರ್ಸ್‌: 4 ವಿಕೆಟ್‌ಗೆ 184 (ಲೆಂಡ್ಲ್ ಸಿಮ್ಮನ್ಸ್ 25, ಸುನೀಲ್ ನಾರಾಯಣ್ 29, ಕಾಲಿನ್ ಮನ್ರೊ 65, ಪೊಲ್ಲಾರ್ಡ್ 33*, ಬ್ರಾಥ್‌ವೇಟ್ 36ಕ್ಕೆ 2, ಎಡ್ವರ್ಡ್ಸ್ 48ಕ್ಕೆ 1, ಲಮಿಚೇನ್ 20ಕ್ಕೆ 1), ಜಮೈಕಾ ತಲ್ಲವಾಹ್ಸ್: 6 ವಿಕೆಟ್‌ಗೆ 165 (ಗ್ಲೆನ್ ಫಿಲಿಪ್ಸ್ 41, ಬ್ಲ್ಯಾಕ್‌ವುಡ್ 12, ಬೋನರ್ 26, ಆಂಡ್ರೆ ರಸೆಲ್ 50*, ಬ್ರಾಥ್‌ವೇಟ್ 21*, ವಾದ್ ಅಹ್ಮದ್ 21ಕ್ಕೆ 2, ನಾರಾಯಣ್ 23ಕ್ಕೆ 1, ಡ್ವೇಯ್ನ ಬ್ರಾವೊ 37ಕ್ಕೆ 1). ಪಂದ್ಯಶ್ರೇಷ್ಠ: ಕಾಲಿನ್ ಮನ್ರೊ.

ಗಯಾನಾ ವಾರಿಯರ್ಸ್‌ ಜಯಭೇರಿ

ದಿನದ 2ನೇ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್‌ ತಂಡ ಬಾರ್ಬಡೋಸ್ ಟ್ರೈಡೆಂಟ್ಸ್ ವಿರುದ್ಧ 8 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಬಾರ್ಬಡೋಸ್ ತಂಡ ಒಂದು ಹಂತದಲ್ಲಿ 27 ರನ್‌ಗೆ 8 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿತ್ತು. ಬಳಿಕ ಮಿಚೆಲ್ ಸ್ಯಾಂಟ್ನರ್ (36), ರಶೀದ್ ಖಾನ್ (19) ತಂಡದ ಮೊತ್ತವನ್ನು 92 ರನ್‌ಗೆ ಏರಿಸಿದರು. ಪ್ರತಿಯಾಗಿ ಗಯಾನಾ ತಂಡ ಆರಂಭಿಕ ಬ್ರೆಂಡನ್ ಕಿಂಗ್ (51*) ಅರ್ಧಶತಕದ ನೆರವಿನಿಂದ 16.4 ಓವರ್‌ಗಳಲ್ಲಿ 2 ವಿಕೆಟ್‌ಗೆ 93 ರನ್ ಪೇರಿಸಿ ಜಯಭೇರಿ ಬಾರಿಸಿತು. 8ನೇ ಪಂದ್ಯದಲ್ಲಿ 4ನೇ ಗೆಲುವು ಒಲಿಸಿಕೊಂಡ ಗಯಾನಾ ತಂಡ ಉಪಾಂತ್ಯದ ಆಸೆಯನ್ನು ಜೀವಂತ ಉಳಿಸಿಕೊಂಡಿದೆ.

ಬಾರ್ಬಡೋಸ್ ಟ್ರೈಡೆಂಟ್ಸ್: 20 ಓವರ್‌ಗಳಲ್ಲಿ 92 (ಹೋಲ್ಡರ್ 0, ಶೈ ಹೋಪ್ 5, ಸ್ಯಾಂಟ್ನರ್ 36, ರಶೀದ್ ಖಾನ್ 19, ಹೇಡನ್ ವಾಲ್ಶ್ 12*, ನವೀನ್ ಉಲ್ ಹಕ್ 14ಕ್ಕೆ 4, ಸಿಂಕ್ಲೇರ್ 13ಕ್ಕೆ 2, ಗ್ರೀನ್ 3ಕ್ಕೆ 1), ಗಯಾನಾ ಅಮೆಜಾನ್ ವಾರಿಯರ್ಸ್‌: 16.4 ಓವರ್‌ಗಳಲ್ಲಿ 2 ವಿಕೆಟ್‌ಗೆ 93 (ಬ್ರೆಂಡನ್ ಕಿಂಗ್ 51*, ಹೆಟ್ಮೆಯರ್ 9, ಪೂರನ್ 18*, ರಶೀದ್ ಖಾನ್ 21ಕ್ಕೆ 1, ಹೇಡನ್ ವಾಲ್ಶ್ 9ಕ್ಕೆ 1). ಪಂದ್ಯಶ್ರೇಷ್ಠ: ನವೀನ್ ಉಲ್ ಹಕ್.

ಬುಧವಾರದ ಪಂದ್ಯಗಳು:

ಟ್ರಿನ್‌ಬಾಗೊ ನೈಟ್‌ರೈಡರ್ಸ್‌-ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪ್ಯಾಟ್ರಿಯಾಟ್ಸ್

ಆರಂಭ: ರಾತ್ರಿ 7.30 (ಭಾರತೀಯ ಕಾಲಮಾನ)

ಗಯಾನಾ ಅಮೆಜಾನ್ ವಾರಿಯರ್ಸ್‌-ಸೇಂಟ್ ಲೂಸಿಯಾ ಜೌಕ್ಸ್

ಆರಂಭ: ಗುರುವಾರ ಮುಂಜಾನೆ 3.00 (ಭಾರತೀಯ ಕಾಲಮಾನ)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net