ಪಾಕಿಸ್ತಾನವನ್ನು ಸಂಪೂರ್ಣ ಕೊನೆಗೊಳಿಸಬೇಕು, ನನ್ನ ತಂದೆ ಸಾವಿಗೆ ಸೇಡು ತೀರಿಸಿಕೊಳ್ಳುತ್ತೇನೆ; ಹುತಾತ್ಮ ಸಾರ್ಜೆಂಟ್ ಮಗಳ ಪ್ರತಿಜ್ಞೆ | Vartika

Vartika
Published on

Vartika: ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಘರ್ಷಣೆಯಲ್ಲಿ ಆರ್‌ಎಸ್ ಪುರ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಪಡೆಗಳು ನಡೆಸಿದ ತೀವ್ರ ಶೆಲ್ ದಾಳಿಯಲ್ಲಿ ಜುನ್ಜುನು ಜಿಲ್ಲೆಯ ವಾಯುಪಡೆಯ ಯೋಧ ಹುತಾತ್ಮರಾಗಿದ್ದರು. ಭಾನುವಾರ ಸಾರ್ಜೆಂಟ್ ಸುರೇಂದ್ರ ಮೋಗಾ ಅವರ ಪಾರ್ಥಿವ ಶರೀರ ತ್ರಿವರ್ಣ ಧ್ವಜದೊಂದಿಗೆ ಮನೆಗೆ ಆಗಮಿಸಿದಾಗ ಮಾಂಡವಾ ಗ್ರಾಮದಲ್ಲಿ ದುಃಖ ಮತ್ತು ಹೆಮ್ಮೆಯ ವಾತಾವರಣ ಆವರಿಸಿತ್ತು. ಇವುಗಳ ನಡುವೆ ಅವರ ಮಗಳು ವರ್ತಿಕಾ "ನನ್ನ ತಂದೆಯ ಬಗ್ಗೆ ನನಗೆ ಹೆಮ್ಮೆ ಇದೆ", "ಶತ್ರುಗಳನ್ನು ಕೊಂದು ರಾಷ್ಟ್ರವನ್ನು ರಕ್ಷಿಸಿದ ಅವರು ಹುತಾತ್ಮರು" ಎಂದು ಶೋಕದ ನಡುವೆ ತಂದೆಯ ಮೇಲಿನ ಗೌರವ ಹಾಗೂ ದೇಶಭಕ್ತಿಯನ್ನು  ವ್ಯಕ್ತಪಡಿಸಿದರು.

ತಂದೆಯ ಜೊತೆಗಿನ ತನ್ನ ಕೊನೆಯ ಸಂಭಾಷಣೆಯನ್ನು ನೆನಪಿಸಿಕೊಳ್ಳುತ್ತಾ, ಹಿಂದಿನ ರಾತ್ರಿ 9 ಗಂಟೆ ಸುಮಾರಿಗೆ ತಮ್ಮ ತಂದೆ ಕುಟುಂಬಕ್ಕೆ ಕರೆ ಮಾಡಿದ್ದರು, ಗಡಿಯ ಮೇಲೆ ಸುಳಿದಾಡುತ್ತಿದ್ದ ಡ್ರೋನ್‌ಗಳ ಬಗ್ಗೆ ಅವರು ಮಾತನಾಡಿದ್ದರು, ಇದು ಅವರಿಗೆ ಸದಾ ಇರುವ ಅಪಾಯದ ಬಗ್ಗೆ ಎಚ್ಚರಿಕೆ ನೀಡಿತು. "ಡ್ರೋನ್‌ಗಳು ಓಡಾಡುತ್ತಿವೆ ಆದರೆ ದಾಳಿ ಮಾಡುತ್ತಿಲ್ಲ ಎಂದು ಅವರು ಹೇಳಿದರು. ಅದು ನಮ್ಮ ಕೊನೆಯ ಸಂಭಾಷಣೆ ಎಂದು ನಮಗೆ ತಿಳಿದಿರಲಿಲ್ಲ" ಎಂದು ವರ್ತಿಕಾ ಭಾವನಾತ್ಮಕವಾಗಿ ವ್ಯಕ್ತಪಡಿಸಿದರು. "ಪಾಕಿಸ್ತಾನವನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು", "ನಾನು ನನ್ನ ತಂದೆಯಂತೆ ಸೈನಿಕನಾಗಲು ಮತ್ತು ಅವರ ಸಾವಿಗೆ ಸೇಡು ತೀರಿಸಿಕೊಳ್ಳಲು ಬಯಸುತ್ತೇನೆ" ಎಂದು ತಮ್ಮ ಮನದ ಮಾತನ್ನು ಹೇಳಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾರತೀಯ ಪ್ರವಾಸಿಗರು ಸಾವನ್ನಪ್ಪಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾದ ನಂತರ ನಡೆದ ದಾಳಿಯಲ್ಲಿ ಸಾರ್ಜೆಂಟ್ ಸುರೇಂದ್ರ ಮೋಗಾ ಅವರ ಸಾವು ಸಂಭವಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಮೇ 7 ರಂದು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು, ಇದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಒಂಬತ್ತು ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡ ದಾಳಿಯಾಗಿತ್ತು. ಸಾರ್ಜೆಂಟ್ ಮೋಗಾ ಇದ್ದ ಆರ್‌ಎಸ್ ಪುರ ವಲಯ ಸೇರಿದಂತೆ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಶೆಲ್ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಭಾರೀ ಗುಂಡಿನ ದಾಳಿಯ ನಡುವೆಯೂ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾ ಹುತಾತ್ಮರಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net