

ಶ್ರೀನಗರ: ವಿಶ್ವವಿಡೀ ಕರೊನಾ ಮಹಾಮಾರಿಯಿಂದ ನಲುಗುತ್ತಿದ್ದರೆ, ಅತ್ತ ಪಾಕಿಸ್ತಾನವು ತನ್ನ ಕುತಂತ್ರ ಬುದ್ಧಿಯನ್ನು ಮುಂದುವರೆಸುತ್ತಿದೆ. ನಿಷೇಧಿತ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಹಾಯದಿಂದ ಪಾಕಿಸ್ತಾನವು ಎರಡು ಹೊಸ ಭಯೋತ್ಪಾದಕರ ಗುಂಪನ್ನು ರಚಿಸುವ ಮೂಲಕ, ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾಗಿರುವ ಭಾರತೀಯ ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂಬ ಸುದ್ದಿ ಬಂದಿದೆ.
‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ಮತ್ತು ತೆಹ್ರೀಕ್-ಇ-ಮಿಲಾತ್-ಇ-ಇಸ್ಲಾಮಿ (ಟಿಎಂಐ) ಅನ್ನು ರಹಸ್ಯವಾಗಿ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಹೊಸದಾಗಿ ರಚಿಸಿದೆ. ಈ ಹೊಸ ಗುಂಪಿನ ರಚನೆಯು ನಿಷೇಧಿತ ಭಯೋತ್ಪಾದಕ ಗುಂಪು ಲಷ್ಕರ್-ಎ-ತಯಬಾ (ಎಲ್‌ಇಟಿ) ಸಹಾಯದಿಂದ ಮಾಡಲಾಗಿದೆ. ಈ ಮೂಲಕ, ಪಾಕಿಸ್ತಾನವು ಭಾರತದ ಮೇಲೆ ದಾಳಿ ಹಾಕಲು ಹೊಂಚು ಹಾಕುತ್ತಿದೆ ಎನ್ನಲಾಗಿದೆ.
ಕಾಶ್ಮೀರದ ಕಣಿವೆಯಲ್ಲಿ ಸ್ಥಾಪಿತಗೊಂಡಿರುವ ತೆಹ್ರೀಕ್-ಇ-ಮಿಲಾತ್-ಇ-ಇಸ್ಲಾಮಿ (ಟಿಎಂಐ) ಸಂಘಟನೆಯ ಕಮಾಂಡರ್ ನಯೀಮ್ ಫಿರ್ದೌಸ್ ಆಡಿಯೋ ಹೇಳಿಕೆ ನೀಡಿದ್ದು, ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಉಗ್ರಗಾಮಿ ಗುಂಪುಗಳನ್ನು ಒಂದುಗೂಡಿಸುವಂತೆ ಕೇಳಿಕೊಂಡಿದ್ದಾನೆ. ಈ ಎರಡೂ ಗುಂಪುಗಳು ವಾಟ್ಸ್ ಆ್ಯಪ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿವೆ ಎಂದು ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಜೆಕೆ ಫೈಟರ್ಸ್’ ಎಂದೂ ಕರೆಯಲ್ಪಡುವ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಲಷ್ಕರ್-ಎ- ತಯಬಾದ ಒಂದು ಭಾಗವಾಗಿರಬಹುದು ಎಂದು ಭದ್ರತಾ ಸಂಸ್ಥೆಗಳು ಶಂಕಿಸಿವೆ, ಆದರೆ ಟಿಎಂಐ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. 430 ರಿಂದ 450 ಮಂದಿ ಭಯೋತ್ಪಾದಕರು ಕಾಶ್ಮೀರಕ್ಕೆ ನುಸುಳಲು ತರಬೇತಿ ಪಡೆಯುತ್ತಿರುವ ಬಗ್ಗೆ ಭದ್ರತಾ ಸಂಸ್ಥೆಗಳು ಮಾಹಿತಿ ಕಲೆ ಹಾಕಿವೆ. ರಾಜಕಾರಣಿಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸುವ ಸಲುವಾಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸುವುದು ಹೊಸದಾಗಿ ರೂಪುಗೊಂಡ ಗುಂಪಿನ ಮುಖ್ಯ ಉದ್ದೇಶವಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)