ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್​ ಮನಗೆದ್ದಿದ್ದ ಸುಶಾಂತ್​ ಸಿಂಗ್​!

Shoaib-Akhtar
Published on

ಸುಶಾಂತ್​ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಪೊಲೀಸ್​ ವರದಿ ಪ್ರಕಾರ ಆತ್ಮಹತ್ಯೆ ಎಂದು ಸಾಬೀತಾದರೂ,ಆ ಆತ್ಮಹತ್ಯೆಗೆ ಕಾರಣವಾಗಿದ್ದೇನು ಎಂಬುದಕ್ಕೆ ಪೊಲೀಸ್​ ಇಲಾಖೆ ತನಿಖೆ ನಡೆಸುತ್ತಿದೆ. ಈಗಾಗಲೇ 27 ಮಂದಿಯನ್ನು ವಿಚಾರಣೆ ಮಾಡಿ, ಮಾಹಿತಿ ಕಲೆಹಾಕುತ್ತಿದೆ. ಇದೆಲ್ಲದರ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್​ ಅಖ್ತರ್, ಸುಶಾಂತ್​ ಸಿಂಗ್​ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ವಿಡಿಯೋ ಮಾಡಿ ಅದರಲ್ಲಿ ತಾವು ಕಂಡ ಸುಶಾಂತ್​ ಬಗ್ಗೆ ಹೇಳಿಕೊಂಡಿದ್ದಾರೆ. ‘ಸುಶಾಂತ್​ ಸುದ್ದಿ ಕೇಳುತ್ತಿದ್ದಂತೆ ತುಂಬ ಬೇಸರವಾಯ್ತು. ಆತ್ಮಹತ್ಯೆ ಎಂದಾಗಲೇ ಅದರ ನೋವು ದುಪ್ಪಟ್ಟಾಯ್ತು. 2016ರಲ್ಲಿ ಮುಂಬೈನಲ್ಲಿ ನಾನು ಸುಶಾಂತ್​ನನ್ನು ಭೇಟಿಯಾಗಿದ್ದೆ. ಆಗ ಎಮ್​.ಎಸ್​. ಧೋನಿ ಬಯೋಪಿಕ್​ನಲ್ಲಿ ಧೋನಿ ಪಾತ್ರ ಮಾಡಲಿದ್ದಾನೆ ಎಂಬ ಸುದ್ದಿ ನನಗೆ ಗೊತ್ತಾಯ್ತು. ಆದರೆ, ಧೋನಿ ಪಾತ್ರ ಈ ಹುಡುಗನ ಕೈಯಿಂದ ನಿಭಾಯಿಸಲು ಸಾಧ್ಯವಾ ಎಂದುಕೊಂಡಿದ್ದೆ. ಭೇಟಿ ವೇಳೆ ಕ್ರಿಕೆಟ್​ನ ಅನುಭವವನ್ನು ಹೇಳುವಂತೆ ಕೋರಿದ್ದರು. ನಾನು ಅದಕ್ಕೆ ಒಪ್ಪಿರಲಿಲ್ಲ. ಆದರೆ, ಇದೀಗ ಆವತ್ತು ಮಾತನಾಡದಿದ್ದಕ್ಕೆ ನನಗೆ ವಿಷಾದ ಎನಿಸುತ್ತಿದೆ’ ಎಂದಿದ್ದಾರೆ ಶೋಯೆಬ್​ ಅಖ್ತರ್​.

ಜತೆಗೆ ಆತ್ಮಹತ್ಯೆ ನಿರ್ಧಾರದ ಬಗ್ಗೆಯೂ ಬೇರ ವ್ಯಕ್ತಪಡಿಸಿದ್ದಾರೆ. ‘ಎಲ್ಲ ಸಮಸ್ಯೆಗಳಿಗೆ ಸರಳವಾದ ಉಪಾಯ ಎಂದರೆ ಅದಕ್ಕೆ ಸಾವೊಂದೆ ಪರಿಹಾರ ಅಲ್ಲ. ಹಾಗಾಗಿ ನಿಮ್ಮ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತಿವೆ ಎಂದಾದರೆ, ಅವುಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ. ದೀಪಿಕಾ ಪಡುಕೋಣೆ ಸಹ ಖಿನ್ನತೆಯಿಂದ ಬಳಲುತ್ತಿದ್ದರು. ಅದನ್ನು ಬಹಿರಂಗವಾಗಿ ಹೇಳಿಕೊಂಡು, ಸಹಾಯ ಮಾಡಿ ಎಂದಿದ್ದರು. ಸುಶಾಂತ್​ಗೂ ಅಂಥದ್ದೇ ಸಹಾಯದ ಜರೂರತ್ತು ಬೇಕಾಗಿತ್ತು. ಆದರೆ, ಅದ್ಯಾವುದೂ ಈಡೇರಲಿಲ್ಲ’ ಎಂದು ಬೇಸರ ಹೊರಹಾಕುತ್ತಾರೆ ಶೋಯೆಬ್​. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net