ನವದೆಹಲಿ: ಬಾಂಗ್ಲಾದೇಶ ವಿರುದ್ಧ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ತಂಡವು ಹೀನಾಯವಾಗಿ ಸೋಲುಂಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಅತ್ತ ಸರಣಿ ಸೋಲಿನ ಮೂಲಕ ವಿಶ್ ಟೆಸ್ಟ್ ಚಾಂಪಿಯನ್ಶಿಪ್ ಕನಸು ಭಗ್ನಗೊಂಡಿದ್ದು, ಸೋಲಿನ ಆಘಾತದಿಂದ ಹೊರಬರುವ ಮುನ್ನವೇ ಮತ್ತೊಂದು ಶಾಕ್ ಹೊಡೆದಿದೆ.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಸೋಲಿನ ನಂತರ ಇದೀಗ ಪಾಕಿಸ್ತಾನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಭಾರೀ ಕುಸಿತ ಕಂಡಿದ್ದು, 1965ರ ಬಳಿಕ ಇದೇ ಮೊದಲ ಬಾರಿಗೆ 8 ಸ್ಥಾನಕ್ಕೆ ಕುಸಿದಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಗೂ ಮೊದಲು ಪಾಕಿಸ್ತಾನ 06ನೇ ಸ್ಥಾನದಲ್ಲಿತ್ತು. ಇದೀಗ ಸರಣಿ ಸೋಲಿನ ಬಳಿಕ 08ನೇ ಸ್ಥಾನಕ್ಕೆ ಕುಸಿದಿದ್ದು, ಮಾಜಿ ಆಟಗಾರರು ತಂಡದ ಕಳಪೆ ಪ್ರದರ್ಶನಕ್ಕೆ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್; ಶಾಟ್ಪುಟ್ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟ ಸಚಿನ್ ಖಿಲಾರಿ
ಇದೀಗ ರ‍್ಯಾಂಕಿಂಗ್‌ನಲ್ಲಿ 8ನೇ ಸ್ಥಾನ ಪಡೆಯುವ ಮೂಲಕ ಪಾಕಿಸ್ತಾನ ತಂಡ 1965 ರ ನಂತರ ಈ ಕಳಪೆ ಸಾಧನೆ ಮಾಡಿದ್ದು, ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ವೆಸ್ಟ್ ಇಂಡೀಸ್ಗಿಂತ ಕಳಕ್ಕೆ ಕುಸಿದಿದೆ. ಪಾಕ್ ಕುಸಿತವನ್ನು ಲಾಭ ಪಡೆದಿರುವ ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಕ್ರಮವಾಗಿ ಆರು ಮತ್ತು ಏಳನೇ ಸ್ಥಾನದಲ್ಲಿವೆ.
ಪಾಕಿಸ್ತಾನವನ್ನು ಅವರದ್ದೇ ನೆಲದಲ್ಲಿ ಸೋಲಿಸಿ ದಾಖಲೆ ನಿರ್ಮಿಸಿರುವ ಬಾಂಗ್ಲಾದೇಶ ತಂಡ 66 ರೇಟಿಂಗ್ ಅಂಕಗಳೊಂದಿಗೆ ಪ್ರಸ್ತುತ 9 ನೇ ಸ್ಥಾನದಲ್ಲಿದೆ. ಸದ್ಯ 124 ಅಂಕಗಳೊಂದಿಗೆ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದು, 120 ಅಂಕಗಳೊಂದಿಗೆ ಟೀಂ ಇಂಡಿಯಾ ಎರಡನೇ ಸ್ಥಾನದಲ್ಲಿದೆ. 2025ರ ಜುಲೈ 11-15 ರವರೆಗೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫಿನಾಲೆ ನಡೆಯಲಿದೆ.