ಪಾಕಿಸ್ತಾನದ ಬ್ಯಾಟ್ಸ್‌ಮನ್ ಬಾಬರ್ ಅಜಮ್ ವಿರುದ್ಧ ಅಭಿಮಾನಿಗಳು ಗರಂ..!

babar azam for web
Published on

ಸೌಥಾಂಪ್ಟನ್: ಪಾಕಿಸ್ತಾನದ ಬ್ಯಾಟ್ಸ್‌ಮನ್ ಬಾಬರ್ ಅಜಮ್, ತಮ್ಮದೇ ಅಭಿಮಾನಿಗಳ ಪಡೆ ಹೊಂದಿದ್ದಾರೆ. ಮೂರು ಮಾದರಿಯ ಕ್ರಿಕೆಟ್‌ಗೆ ಸೈ ಎನಿಸಿಕೊಂಡಿರುವ ಬಾಬರ್ ಅಜಮ್ ಅವರನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಹೋಲಿಸಲಾಗುತ್ತಿದೆ. ಇತ್ತೀಚೆಗಷ್ಟೇ ಪಾಕಿಸ್ತಾನ ತಂಡ, ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಟಿ20 ಸರಣಿಯಲ್ಲಿ ಸಮಬಲ ಸಾಧಿಸಿದ ಬಳಿಕ ಪಾಕಿಸ್ತಾನದ ಬಾಬರ್ ಅಜಮ್, ಇಂಗ್ಲೆಂಡ್‌ನಲ್ಲೇ ವಿಟಾಲಿಟಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸೊಮರ್‌ಸೆಟ್ ತಂಡದ ಪರ ಆಡುತ್ತಿದ್ದಾರೆ. ಇದೀಗ ಆಡಿದ ಮೊದಲ ಪಂದ್ಯದಲ್ಲೇ ಬಾಬರ್ ವಿವಾದಕ್ಕೆ ಗುರಿಯಾಗಿದ್ದಾರೆ. ತಂಡದ ಜೆರ್ಸಿಗೆ ಆಲ್ಕೋಹಾಲ್ ಬ್ರ್ಯಾಂಡ್‌ವೊಂದರ ಹೆಸರು ಬರೆದಿದ್ದೆ ಇದಕ್ಕೆ ಕಾರಣ.

ಆಲ್ಕೋಹಾಲಿಕ್ ಹೆಸರಿದ್ದ ಜೆರ್ಸಿ ಧರಿಸಿದ್ದಕ್ಕೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಬಾಬರ್ ಅಜಮ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಬಾಬರ್ ಜೆರ್ಸಿಯ ಹಿಂಭಾಗ ಆಲ್ಕೋಹಾಲಿಕ್ ಬ್ರ್ಯಾಂಡ್‌ನ ಹೆಸರು ಇದ್ದದ್ದೆ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಸೊಮರ್‌ಸೆಟ್ ಪರ ಆಡುತ್ತಿರುವ ಬಾಬರ್, ಗುರುವಾರದ ಪಂದ್ಯದಲ್ಲಿ ವೊರ್‌ಚೆಸ್ಟ್‌ಷೈರ್ ಎದುರು 42 ರನ್ ಸಿಡಿಸಿದರು. ಅಯಾತಪ್ಪಿ, ಆಲ್ಕೋಹಾಲಿಕ್ ಹೆಸರು ಬಾಬರ್ ಜೆರ್ಸಿ ಮೇಲೆ ಮುದ್ರಣವಾಗಿದೆ. ಮುಂದಿನ ಪಂದ್ಯದ ವೇಳೆಗೆ ಹೆಸರನ್ನು ಬದಲಿಸಲಾಗುವುದು ಎಂದು ಪಾಕಿಸ್ತಾನದ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪಾಕಿಸ್ತಾನದ 25 ವರ್ಷದ ಆಟಗಾರ ಬಾಬರ್ ಅಜಮ್ ಉತ್ತಮ ನಿರ್ವಹಣೆ ನೀಡುವಲ್ಲಿ ವಿಫಲರಾಗಿದ್ದರು. 3 ಟೆಸ್ಟ್ ಪಂದ್ಯಗಳಿಂದ 195 ರನ್ ಬಾರಿಸಿದ್ದರೆ, 2 ಟಿ20 ಪಂದ್ಯಗಳಿಂದ 77 ರನ್ ಕಲೆಹಾಕಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net