

ನವದೆಹಲಿ/ಲಾಹೋರ್: ಭಾರತದ ಕ್ರಿಕೆಟಿಗರನ್ನು ತಾನು ಹೊಗಳುತ್ತಿರುವ ಬಗ್ಗೆ ಟೀಕೆಗಳು ಎದುರಾಗಿರುವುದಕ್ಕೆ ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ದಿಟ್ಟ ತಿರುಗೇಟು ನೀಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಸಕ್ತ ವಿಶ್ವದ ಅಗ್ರ ಬ್ಯಾಟ್ಸ್‌ಮನ್ ಎಂಬುದನ್ನು ಒಪ್ಪಿಕೊಳ್ಳಿ ಮತ್ತು ಅವರು ಎಲ್ಲ ಪ್ರಶಂಸೆಗಳಿಗೆ ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.
‘ವಿರಾಟ್ ಕೊಹ್ಲಿ ಸಹಿತ ಭಾರತೀಯ ಕ್ರಿಕೆಟಿಗರನ್ನು ನಾನೇಕೆ ಹೊಗಳಬಾರದು? ಸದ್ಯ ವಿರಾಟ್ ಕೊಹ್ಲಿ ಅವರ ಸನಿಹ ಬರುವ ಆಟಗಾರರು ಯಾರಾದರೂ ಪಾಕಿಸ್ತಾನ ಅಥವಾ ವಿಶ್ವದ ಬೇರೆಡೆ ಇದ್ದಾರೆಯೇ?’ ಎಂದು ಅಖ್ತರ್ ಪ್ರಶ್ನಿಸಿದ್ದಾರೆ.
‘ಜನರು ಯಾಕೆ ಸಿಟ್ಟು ಮಾಡಿಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ನನ್ನ ಟೀಕಿಸುವ ಮೊದಲು ಅವರು ಅಂಕಿ-ಅಂಶಗಳನ್ನು ಪರಿಶೀಲಿಸಲಿ. ಭಾರತೀಯರಾಗಿರುವ ಕಾರಣಕ್ಕಾಗಿ ವಿರಾಟ್ ಕೊಹ್ಲಿಯನ್ನು ದ್ವೇಷಿಸುವುದು ಸರಿಯಲ್ಲ. ಅದೇ ಕಾರಣಕ್ಕಾಗಿ ಅವರನ್ನು ಹೊಗಳದೇ ಇರುವುದು ಸರಿಯಲ್ಲ’ ಎಂದು ಅಖ್ತರ್ ಹೇಳಿದ್ದಾರೆ.
ಕೊಹ್ಲಿ ಸಾಮರ್ಥ್ಯದ ಬಗ್ಗೆ ಯಾರಿಗಾದರೂ ಅನುಮಾನಗಳಿದ್ದರೆ ಅವರು ದಾಖಲೆಗಳನ್ನು ಪರಿಶೀಲಿಸಲಿ ಎಂದಿರುವ ಅಖ್ತರ್, ‘ವಿರಾಟ್ ಕೊಹ್ಲಿ ಅವರು ಈಗ 70 ಅಂತಾರಾಷ್ಟ್ರೀಯ ಕ್ರಿಕೆಟ್ ಶತಕಗಳನ್ನು ಸಿಡಿಸಿದ್ದಾರೆ. ಸದ್ಯ ಹಾಲಿ ಆಟಗಾರರ ಪೈಕಿ ಬೇರೆ ಯಾರು ಇಷ್ಟು ಶತಕಗಳನ್ನು ಸಿಡಿಸಿದ್ದಾರೆ. ಅವರು ಭಾರತಕ್ಕಾಗಿ ಎಷ್ಟು ಸರಣಿಗಳನ್ನು ಗೆದ್ದು ಕೊಟ್ಟಿದ್ದಾರೆ ಗೊತ್ತೇ?’ ಎಂದಿದ್ದಾರೆ.
‘ವಿರಾಟ್ ಕೊಹ್ಲಿ ಈಗ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರು ಮತ್ತು ರೋಹಿತ್ ಶರ್ಮ ಅತ್ಯಂತ ಸ್ಥಿರ ನಿರ್ವಹಣೆ ತೋರುತ್ತಿದ್ದಾರೆ. ಹೀಗಿರುವಾಗ ಅವರಿಬ್ಬರನ್ನು ಯಾಕೆ ಹೊಗಳಬಾರದು’ ಎಂದು ಅಖ್ತರ್ ಮತ್ತೊಮ್ಮೆ ಪ್ರಶ್ನಿಸಿದ್ದಾರೆ.