

ಡ್ಯಾಲೆಸ್: ಪ್ರಸಕ್ತ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಳು ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿದ್ದು, ಜೂ.06ರಂದು ನಡೆದ ರೋಚಕ ಸೂಪರ್ ಓವರ್ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಪಾಕಿಸ್ತಾನ ತಂಡ ಹೀನಾಯ ಸೋಲು ಅನುಭವಿಸಿತು. ಸೋಲುಂಡ ಪಾಕ್ ತಂಡಕ್ಕೆ ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದ ಕ್ರಿಕೆಟ್ ಅಭಿಮಾನಿಗಳು, ಇದೀಗ ತಂಡದ ವೇಗಿ ಶಾಹೀನ್ ಆಫ್ರಿದಿ ನಡೆಯನ್ನು ಖಂಡಿಸಿ, ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಯುಎಸ್ಎ ವಿರುದ್ಧ ಹೀನಾಯವಾಗಿ ಸೋತ ಪಾಕ್ ತಂಡದ ವಿರುದ್ಧ ಮೊದಲೇ ಸಿಡಿದೆದ್ದ ಅಭಿಮಾನಿಗಳು, ಪಂದ್ಯ ಮುಗಿದ ಬಳಿಕ ಶಾಹೀನ್ ಆಫ್ರಿದಿ ಮಾಡಿದ ಕೆಲಸ ಕಂಡು ಹಿಗ್ಗಾಮುಗ್ಗಾ ಟ್ರೋಲ್ ಮಾಡಿ, ಟೀಕಿಸಿದ್ದಾರೆ. ಯುಎಸ್ಎ ಮುಂದೆ ಸೋತು ಸುಣ್ಣವಾದ ಪಾಕಿಸ್ತಾನ ಆಟಗಾರರು, ಇನ್ನಾದರೂ ಬುದ್ದಿ ಕಲಿತು, ಉತ್ತಮ ಪ್ರದರ್ಶನ ನೀಡಲಿ ಎಂದು ಹಲವರು ಸಲಹೆ ನೀಡಿದರೆ, ಇತ್ತ ಆಫ್ರಿದಿ ಮಾತ್ರ ಟಿವಿಯಲ್ಲಿ ಪಂದ್ಯದ ಹೈಲೈಟ್ಸ್ ಹಾಕಿಕೊಂಡು, ತನ್ನ ಬ್ಯಾಟಿಂಗ್ ನೋಡುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
ಅಜೇಯ 16 ಬಾಲ್ಗೆ 23 ರನ್ ಸಿಡಿಸಿದ ಶಾಹೀನ್ ಆಫ್ರಿದಿ, ಪಾಕ್ ಬ್ಯಾಟಿಂಗ್ ಹೈಲೈಟ್ಸ್ ನೋಡುತ್ತ, ಆರಾಮದಾಯಕವಾಗಿ ಹಾಸಿಗೆ ಮೇಲೆ ಕುಳಿತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಕ್ರಿಕೆಟ್ ಫ್ಯಾನ್ಸ್ ಕೆಂಡಾಮಂಡಲಗೊಂಡಿದ್ದು, ಮುಂಬರುವ ಪಂದ್ಯಕ್ಕಾದರೂ ಉತ್ತಮ ತರಬೇತಿ ಪಡೆದುಕೊಳ್ಳಿ, ಇಂತಹ ಕಳಪೆ ಪ್ರದರ್ಶನ ನೀಡುವುದನ್ನು ಮೊದಲು ನಿಲ್ಲಿಸಿ ಎಂದೆಲ್ಲಾ ಕಮೆಂಟ್ ಮಾಡಿ, ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).