

ಹೈದರಾಬಾದ್: ಮಹಾರಾಷ್ಟ್ರ ಚುನಾವಣೆ(Elections)ಯಲ್ಲಿ ಎನ್ಡಿಎ ವಿರುದ್ಧ ಒಟ್ಟಾಗಿ ಹೋರಾಡುವಂತೆ ತಮ್ಮ ಪಕ್ಷವು ಆ ರಾಜ್ಯದ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಮತ್ತು ಎನ್ಸಿಪಿ-ಎಸ್ಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಪತ್ರ ಬರೆದಿದೆ ಎಂದು ಓವೈಸಿ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿಂದೆ-ಫಡ್ನವೀಸ್ ಸರಕಾರ ನಮಗೂ ಬೇಡ. ಈ ಬಗ್ಗೆ ನಮ್ಮ ಪಕ್ಷದ ಮಾಜಿ ಸಂಸದ ಇಮ್ತಿಯಾಜ್ ಜಲೀಲ್ ನಾನಾ ಪಟೋಲೆ ಹಾಗೂ ಶರದ್ ಪವಾರ್ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಅವರೇ ನಿರ್ಧರಿಸಬೇಕು. ಇನ್ನೇನು ಮಾಡಲು ಸಾಧ್ಯ? ಎಂದು ಓವೈಸಿ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಎಐಎಂಐಎಂ ಪ್ರಬಲ ಅಸ್ತಿತ್ವ ಹೊಂದಿದೆ. 2019 ರ ಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದಿತ್ತು. ಮರಾಠ ಮೀಸಲಾತಿ ಹೋರಾಟದ ಮುಖಂಡ ಜಾರಂಗೆ ಪಾಟೀಲ ಅವರನ್ನೂ ಸಂಪರ್ಕಿಸುತ್ತಿದ್ದು, ಅವರೇ ತೀರ್ಮಾನ ಕೈಗೊಳ್ಳಬೇಕು ಎಂದರು.
ಎಐಎಂಐಎಂ ಚುನಾವಣೆಗೆ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಸುಲಭವಾಗಿ ಗೆಲ್ಲಬಹುದಿತ್ತು ಆದರೆ ಗೆಲ್ಲಲಿಲ್ಲ ಎಂದು ಹೇಳಿದರು. ಅದಕ್ಕೆ ಕಾರಣಗಳನ್ನು ವಿಶ್ಲೇಷಿಸಬೇಕು, ಆದರೆ ಮಹಾರಾಷ್ಟ್ರದಲ್ಲಿ ನಾವು ಮೈತ್ರಿಗೆ ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಚೆಂಡು ಅವರ ಅಂಗಳದಲ್ಲಿದೆ ಎಂದು ಇಂಡಿಯಾ ಮೈತ್ರಿ ಕೂಟದಲ್ಲಿನ ಪಕ್ಷಗಳ ಕುರಿತು ಹೇಳಿದರು.