

ಬೆಂಗಳೂರು: ಹಬ್ಬ ಹರಿದಿನಗಳಲ್ಲಿ ಚಿನ್ನ(Gold Price) ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುವುದು ಸಾಮಾನ್ಯ. ಅದೇ ರೀತಿ ಈ ಬಾರಿಯೂ ದೀಪಾವಳಿ ಹತ್ತಿರ ಬರುತ್ತಿದ್ದಂತೆ ಬೆಲೆ ಏರುಮುಖದತ್ತ ಸಾಗಿದೆ.
ಹೆಚ್ಚುತ್ತಿರುವ ಬೇಡಿಕೆ, ವಿಶ್ವ ಮತ್ತು ದೇಶದಲ್ಲಿ ಸಂಭವಿಸುತ್ತಿರುವ ರಾಜಕೀಯ, ಆರ್ಥಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಹೆಚ್ಚಳ ಕಂಡುಬಂದಿದೆ. ಅದೇ ರೀತಿ ಭಾರತದ ಬುಲಿಯನ್ ಮಾರುಕಟ್ಟೆಯಲ್ಲಿ ಈ ಎರಡೂ ಅಮೂಲ್ಯ ಲೋಹಗಳ ಬೆಲೆ ಹೆಚ್ಚಾಗಿದೆ.
ಅ.18(ಶುಕ್ರವಾರ)ಕೂಡ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನು ಬಿಡುಗಡೆ ಮಾಡಲಾಗಿದೆ.
ಗ್ರಾಹಕರಿಂದ ಹೆಚ್ಚಿದ ಖರೀದಿಯಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಬೆಲೆಬಾಳುವ ಈ ಲೋಹಗಳಿಗೆ ದಾಖಲೆ ಮಟ್ಟದಲ್ಲಿ ಬೇಡಿಕೆ ಬಂದಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಮತ್ತು ಮುಂಬರುವ ಯುಎಸ್ ಅಧ್ಯಕ್ಷೀಯ ಚುನಾವಣೆಗಳ ಅನಿಶ್ಚಿತತೆಯ ನಡುವೆ, ಹೂಡಿಕೆದಾರರು ಹಳದಿ ಲೋಹವನ್ನು ಹೂಡಿಕೆಗೆ ಸುರಕ್ಷಿತ ಮಾರ್ಗವೆಂದು ಪರಿಗಣಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಲ್ ಇಂಡಿಯಾ ಬುಲಿಯನ್ ಅಸೋಸಿಯೇಷನ್ ಪ್ರಕಾರ, ಹಬ್ಬದ ಸೀಸನ್ನಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ ಅ.18ರಂದು ರಾಷ್ಟ್ರ ರಾಜಧಾನಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ಸಾರ್ವಕಾಲಿಕ ಗರಿಷ್ಟ ಬೆಲೆ 550 ರೂಪಾಯಿ ಏರಿಕೆಯಾಗಿ ದಾಖಲೆಯ ಗರಿಷ್ಠ 79,900 ರೂಪಾಯಿಗೆ ತಲುಪಿದೆ. ಗುರುವಾರ(ಅ.17)ದಂದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 79,350 ರೂ. ಇತ್ತು.
ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಈ ಮೂರು ದಿನಗಳಲ್ಲಿ ಚಿನ್ನ 22 ಕ್ಯಾರೆಟ್ 10 ಗ್ರಾಂಗೆ 550 ರೂ. ಏರಿಕೆಯಾಗಿದೆ. ಅಂದರೆ 10 ಗ್ರಾಂಗೆ 78,950 ರೂ. ತಲುಪಿದೆ.
ಅ.18ರಂದು ಬೆಳ್ಳಿ ಬೆಲೆಯಲ್ಲಿ ಸಹ ಏರಿಕೆಯಾಗಿದೆ. ಬೆಳ್ಳಿ ಕೆಜಿಗೆ 1,000 ರೂಪಾಯಿ ಏರಿಕೆಯಾಗಿ 94,500 ರೂಪಾಯಿಗೆ ತಲುಪಿದೆ. ಗುರುವಾರ ಬೆಳ್ಳಿ ಪ್ರತಿ ಕೆಜಿಗೆ 93,500 ರೂ.ನಲ್ಲಿ ಸ್ಥಿರವಾಗಿತ್ತು.