

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಸುಬ್ರಹ್ಮಣ್ಯ ಸಮೀಪದ ಕೈಕಂಬ ಎಂಬಲ್ಲಿ ಹೆದ್ದಾರಿಯ ಹೊಂಡ-ಗುಂಡಿಗೆ ಶಾಶ್ವತ ಪರಿಹಾರ ನೀಡದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ವಿಶಿಷ್ಟ ಬ್ಯಾನರ್ ಅಳವಡಿಸಿದ್ದಾರೆ.
ಕೈಕಂಬದಲ್ಲಿನ ಹೊಂಡ ದುರಸ್ತಿಗೆ ಈ ಮೊದಲೇ ಪ್ರತಿಭಟನೆ ನಡೆಸಲಾಗಿತ್ತು. ಆ ವೇಳೆ ತಾತ್ಕಾಲಿಕ ದುರಸ್ತಿ ನಡೆಸಲಾಗಿದ್ದರೂ ಅಲ್ಲಿ ಮತ್ತೆ ಹೊಂಡ-ಗುಂಡಿ ನಿರ್ಮಾಣಗೊಂಡಿದೆ. ಆ ಬಳಿಕ ದುರಸ್ತಿ ಕಾರ್ಯ ನಡೆಯದೆ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ಆರೋಪಿಸಲಾಗಿದೆ.
ಯಾರೋ ಮಾಂತ್ರಿಕರು ಕೈಕಂಬದಿಂದ-ಕುಕ್ಕೆ ಸುಬ್ರಹ್ಮಣ್ಯವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿರುವ ಕಾರಣ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿ ಹುಡುಕಲು ರಸ್ತೆ ಮಧ್ಯೆಯೇ ದೊಡ್ಡ ಹೊಂಡ ತೋಡಿಸಿ ಹಾಗೆಯೇ ಬಿಟ್ಟಿದೆ. ನಿಧಾನವಾಗಿ ಚಲಿಸಿ ಎಂದು ಬರೆದು ಸರ್ಕಾರವನ್ನು ವಿಡಂಬಿಸಲಾಗಿದೆ. ಈ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.