

ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಒಂದು ಪಾಪ ಕಾರ್ಯ ಮಾಡಿ ಅದಕ್ಕೆ ಪಶ್ಚತ್ತಾಪ ಇಲ್ಲವಾದರೆ ಅದರಿಂದಾಗಿ ಮಾಯ ಕವಿದು ಮತ್ತಷ್ಟು ಪಾಪ ಕಾರ್ಯಗಳನ್ನು ಮಾಡಿಸುತ್ತದೆ. ಹೀಗಾಗಿ ಅಧರ್ಮದ ನಡೆಯಿಂದ ಹೊರಬಂದು ದೇವರ ಭೂಮಿ ದೇವರಿಗೊಪ್ಪಿಸಿ ಕ್ಷಮೆ ಕೇಳಿ ಎದುರಾಗಬಹುದಾದ ಶಾಪದಿಂದ ತಪ್ಪಿಸಿಕೊಳ್ಳಿ. ನಮ್ಮ ಹೋರಾಟ ಈ ದೇಗುಲದ ಜಮೀನು ದೇಗುಲಕ್ಕೆ ಸಿಗುವವರೆಗೂ ಮುಂದುವರಿಯಲಿದೆ ಎಂದು ಹಿಂದು ಧಾರ್ಮಿಕ ದತ್ತಿ ಜಿಲ್ಲಾ ಸಮಿತಿ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ ಹೇಳಿದರು.
ಸೋಮವಾರ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಳದ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ದೇವಳದ ಎದುರು ದೇವಳದ ಜಮೀನು ಲೂಟಿಯ ವಿರುದ್ಧ ಹಾಗೂ ದೇವರ ಆದಾಯವ ಅಕ್ರಮವಾಗಿ ಟ್ರಸ್ಟ್ ಪಾಲಾಗುವುದನ್ನು ಖಂಡಿಸಿ ನ್ಯಾಯಕ್ಕಾಗಿ ನಡೆಸುವ ಧರಣಿಯನ್ನು ಉದ್ಘಾಟಿಸಿ ಮಾತಾಡಿದರು.
ಮಹಾಗಣಪತಿ ದೇವರ ಎದುರು ಪ್ರಾರ್ಥನೆ ಸಲ್ಲಿಸಿ ಬಳಿಕ ವೈದಿಕರು ವೇದಘೋಷ ಮೊಳಗಿಸಿ, ದೀಪ ಪ್ರಜ್ವಲಿಸಿ ಧರಣಿ ಉದ್ಘಾಟಿಸಲಾಯಿತು. ಹೋರಾಟ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಸ್ವಾಗತಿಸಿದರು. ತುಕ್ರಪ್ಪ ಶೆಟ್ಟಿ, ಡಾ.ರಾಜಾರಾಂ, ರೂಪೇಶ್ ರೈ, ವಿಶ್ವನಾಥ ಕೊಲ್ಲಾಜೆ, ನಾಗೇಶ್ ಗೌಡ, ಜಯವಿಕ್ರಮ, ಧಮೇರ್ಂದ್ರ, ಸುಬ್ರಹ್ಮಣ್ಯ ಶಗ್ರಿತ್ತಾಯ, ಶ್ರೀವತ್ಸ ಮೊದಲಾದವರು ಬೆಂಬಲ ಸೂಚಿಸಿದರು. ಮುಖಂಡರಾದ ಪ್ರಶಾಂತ ರೈ, ಶ್ರೀಕೃಷ್ಣ ಭಟ್ ಕುಡ್ತಲಾಜೆ, ದಾಮೋದರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಜಾರಪ್ಪ ಗೌಡ ಗಣೇಶ್ ಕಾಶಿ, ಸುನೀಶ್, ದಯಾನೀಶ, ಸುನೀಶ ನಾಯ್ಕ, ಲಕ್ಷ್ಮೀನಾರಾಯಣ ಉಪ್ಪಾರ್ಣ, ಧನಂಜಯ, ಗೋಪಾಲಕೃಷ್ಣ ಮುನ್ಬಡ್ಕ, ವೇದಿಕೆಯ ಸಲಹೆಗಾರರಾದ ಬಿ.ಎಂ.ಭಟ್, ಪ್ರಶಾಂತ್ ಉಪಸ್ಥಿತರಿದ್ದರು.
ಹೋರಾಟಕ್ಕೆ ಬೆಂಬಲ ನೀಡಿ ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಯೋಗೀಶ್ ನಡಕ್ಕರ, ಜಗನ್ನಾಥ ಚೌಟ, ದೇವಪ್ಪ ಕುಲಾಲ್, ಸರ್ವೋತ್ತಮ ಗೌಡ, ಅಜಿತ್ ಕುಮಾರ್ ಪಾಲೇರಿ, ಪ್ರಕಾಶ್ ಕುಮಾರ್ ಜೈನ್ ಮೊದಲಾದವರು ಭಾಗವಹಿಸಿದ್ದರು. ಶ್ಯಾಮರಾಜ್ ಪಟ್ರಮೆ ಮತ್ತು ಶ್ರೀವತ್ಸ ನಿರೂಪಿಸಿದರು. ಧರಣಿಯನ್ನು ಸಂಜೆ 5 ಗಂಟೆಗೆ ಕೊನೆಗೊಳಿಸಿ ಮಂಗಳವಾರಕ್ಕೆ ಮುಂದೂಡಲಾಯಿತು.