

ಬೆಂಗಳೂರು: 2024ರ ಲೋಕಾಸಭಾ ಚುನಾವಣೆಯಲ್ಲಿ ಮೋದಿಗೆ ವೋಟ್ ಮಾಡಿ (Vote For Modi) ಎಂದು ತಮ್ಮ ಮದುವೆಯ ಆಮಂತ್ರಣ ಪ್ರತಿಕೆಯಲ್ಲಿ ಮುದ್ರಿಸಿದ್ದ ವ್ಯಕ್ತಿ ವಿರುದ್ಧ ಹಾಕಲಾಗಿದ್ದ ಎಫ್ಐಆರ್ ಸೇರಿ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳಿಗೆ ಇದೀಗ ಹೈಕೋರ್ಟ್(High Court) ತಡೆ ನೀಡಿದೆ.
ನ.11ರಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಮಧ್ಯಂತರ ತಡೆ ಆಜ್ಞೆಯನ್ನು ಜಾರಿಗೊಳಿಸಿದರು. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ ಶಿವಪ್ರಸಾದ್ ಸಲ್ಲಿಸಿದ್ದ ತಡೆ ಅರ್ಜಿಗೆ ಉತ್ತರ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಮತ್ತು ಪ್ರಕರಣದ ಮೂಲ ದೂರುದಾರ ಮತಗಟ್ಟೆ ಅಧಿಕಾರಿಗೆ ನೋಟಿಸ್ ನೀಡಿದರು.
ಶಿವ ಪ್ರಸಾದ್ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ''ಮೋದಿಗೆ ವೋಟ್ ಹಾಕಿ, ಇದು ನನ್ನ ಮದುವೆಗೆ ಉಡುಗೊರೆ'' ಎಂಬ ಸಾಲು ಮುದ್ರಿಸಿದ್ದರು. ಇದು ಚುನಾವಣಾ ನೀತಿ ಸಂಹಿತೆ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ದೂರುದಾರರು ತಿಳಿಸಿದ್ದರು. ಹೀಗಾಗಿ, ಇದೇ ವರ್ಷದ ಏ.25ರಂದು ಶಿವಪ್ರಸಾದ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 127ಎ ಅಡಿಯಲ್ಲಿ, ಚುನಾವಣಾಧಿಕಾರಿ ಸಂದೇಶ್ ಕೆ.ಎನ್ ಪ್ರಕರಣ ದಾಖಲಿಸಿಕೊಂಡಿದ್ದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವಿನೋದ್ ಕುಮಾರ್, ''ಆಮಂತ್ರಣ ಪತ್ರಿಕೆಯನ್ನು ಮಾರ್ಚ್ 1ರಂದು ಮುದ್ರಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿ ಘೋಷಿಸಿಸುವ ಮುಂಚಿತವಾಗಿಯೇ ಮುದ್ರಿಸಲಾಗಿದೆ. ಮಾರ್ಚ್ 16ರಂದು ನೀತಿ ಸಂಹಿತೆ ಜಾರಿಯಾಗಿದ್ದು, ದೂರದಾರ ಒಂದು ತಿಂಗಳ ಬಳಿಕ ಏಪ್ರಿಲ್ 19ರಂದು ದೂರು ನೀಡಿದ್ದಾನೆ. ಹೀಗಾಗಿ, ಅರ್ಜಿದಾರ ಶಿವ ಪ್ರಸಾದ್ ಯಾವುದೇ ತಪ್ಪು ಮಾಡಿಲ್ಲ. ನೀತಿ ಸಂಹಿತೆ ಜಾರಿಯಲ್ಲಿ ಇರುವಾಗ ಮಾತ್ರ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯವಾಗುತ್ತೆ" ಎಂದಿದ್ದಾರೆ. ವಾದ ಆಲಿಸಿದ ನ್ಯಾ.ನಾಗಪ್ರಸನ್ನ ಸಿಆರ್ಪಿಸಿ ನಿಂಬಂಧನೆಗಳನ್ನು ಅನುಸರಿಸಲು ಮ್ಯಾಜಿಸ್ಟ್ರೇಟ್ ವಿಫಲವಾಗಿದೆ ಎಂದರು.
ಈ ಪ್ರಕರಣದ ಅಂತಿಮ ವಿಚಾರಣೆ ನಡೆಯುವವರೆಗೂ ಪ್ರಕರಣದ ಎಲ್ಲಾ ಪ್ರಕ್ರಿಯೆಗಳಿಗೆ ತಡೆ ನೀಡಿ ಮಧ್ಯಂತರ ಆದೇಶ ನೀಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಇದೀಗ ಅರ್ಜಿ ವಿಚಾರಣೆಯನ್ನು ಕೋರ್ಟ್ ಡಿ.12ಕ್ಕೆ ಮುಂದೂಡಿದೆ, (ಏಜೆನ್ಸೀಸ್).