ಅನುದಾನ ಕೊಡದಿದ್ದರೆ ಸಿಎಂ ಮನೆ ಮುಂದೆ ಉಪವಾಸ ಸತ್ಯಾಗ್ರಹ ...

Orchestra - Final
Published on

ಕರೊನಾ ಮತ್ತು ಲಾಕ್​ಡೌನ್​ನಿಂದ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಜಾಗತಿಕ ಚಿತ್ರರಂಗವೇ ಗರಬಡಿದಂತಾಗಿದೆ. ಇಲ್ಲಿನ ಕಲಾವಿದರು ಮತ್ತು ತಂತ್ರಜ್ಱರು ಕೆಲಸ ಮತ್ತು ಸಂಬಳ ಇಲ್ಲದೆ ಸಾಕಷ್ಟು ಸಂಕಟ ಪಡುತ್ತಿದ್ದಾರೆ. ಚಿತ್ರರಂಗವನ್ನೇ ನಂಬಿಕೊಂಡಿರುವ ವಾದ್ಯಗೋಷ್ಠಿಯವರು ಸಹ ಕಳೆದ ಮೂರು ತಿಂಗಳುಗಳಲ್ಲಿ ಸಂಪಾದನೆಯೂ ಇಲ್ಲದೆ, ಈ ಕಡೆ ಸರ್ಕಾರದ ಸಹಾಯವೂ ಇಲ್ಲದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಗಣಪತಿ ಹಬ್ಬ ಬಂತೆಂದರೆ, ಆರ್ಕೆಸ್ಟ್ರಾದವರಿಗೆ ಸುಗ್ಗಿ. ಏಕೆಂದರೆ, ರಸ್ತೆರಸ್ತೆಯಲ್ಲಿ ಗಣಪತಿ ಕೂರಿಸುವುದರಿಂದ, ಆರ್ಕೆಸ್ಟ್ರಾದವರಿಗೆ ಪ್ರತಿ ರಾತ್ರಿ ಒಂದಲ್ಲಾ ಒಂದು ಕಡೆ ಕಾರ್ಯಕ್ರಮ ಇದ್ದೇ ಇರುತ್ತದೆ. ಇದು ನಾಲ್ಕು ತಿಂಗಳುಗಳ ಕಾಲ ಮುಂದುವರೆಯುತ್ತದೆ. ಆದರೆ, ಈ ಬಾರಿ ಕರೊನಾದಿಂದ ಸಾರ್ವಜನಿಕವಾಗಿ ಗಣಪತಿ ಕೂರಿಸುವಂತಿಲ್ಲ.

ಇದಕ್ಕೂ ಮುನ್ನ ರಾಮನವಮಿ ಸಂದರ್ಭದಲ್ಲೂ ರಸ್ತೆಗಳಲ್ಲಿ ಆರ್ಕೆಸ್ಟ್ರಾಗಳನ್ನು ಆಯೋಜಿಸಲಾಗುತ್ತದೆ. ಈ ಬಾರಿ ಕರೊನಾದಿಂದ ಆ ಅವಕಾಶವೂ ತಪ್ಪಿ ಹೋಯಿತು. ಇನ್ನು ಮುಂದಿನ ಮೂರು ತಿಂಗಳುಗಳ ಕಾಲ ಕಾರ್ಯಕ್ರಮ ಆಯೋಜಿಸುವುದಕ್ಕೆ ಅನುಮತಿ ಸಿಗುವುದು ಕಷ್ಟವೇ. ಹೀಗಿರುವಾಗ, ವಾದ್ಯಗೋಷ್ಠಿ ಕಲಾವಿದರಿಗೆ ಸರ್ಕಾರ ಸಹಾಯ ಮಾಡಬೇಕು ಎಂದು ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘ ಆಗ್ರಹಿಸಿದೆ.

ಈ ಕುರಿತು ಸಂಘವು ಪತ್ರಿಕಾಗೋಷ್ಠಿ ನಡೆಸಿ, ವಾದ್ಯಗೋಷ್ಠಿ ಕಲಾವಿದರಿಗೆ ಸರ್ಕಾರ ಸಹಾಯ ಮಾಡಬೇಕು ಎಂದು ಮನವಿ ಮಾಡಿದೆ. ಈ ಸಂದರ್ಭದಲ್ಲಿ, ಸೌಂಡ್​ ಆಫ್​ ಮ್ಯೂಸಿಕ್​ನ ಗುರುರಾಜ್​, ಮದನ್​ ಪಟೇಲ್​, ಆರ್​. ಶಂಕರ್​ ಮುಂತಾದವರು ಹಾಜರಿದ್ದರು.

ಈಗಾಗಲೇ ಸಂಘದ ಪರವಾಗಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ, ಸಚಿವ ಸಿ.ಟಿ. ರವಿ, ಸಂಸದ ತೇಜಸ್ವಿ ಸೂರ್ಯ ಮುಂತಾದವರಿಗೆ ಮನವಿ ಪತ್ರವನ್ನು ಕೊಡಲಾಗಿದೆ. ಅಷ್ಟೇ ಅಲ್ಲ, ಆಗಸ್ಟ್​ 11ರ ಮಂಗಳವಾರದಂದು, ಎಲ್ಲಾ ಜಿಲ್ಲೆಗಳಲ್ಲಿ ಮತ್ತೊಮ್ಮೆ ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತದಂತೆ. ಈ ಮನವಿ ಸರ್ಕಾರ ಸ್ಪಂದಿಸದೇ ಇದ್ದರೆ, ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ವಾದ್ಯಗೋಷ್ಠಿ ಕಲಾವಿದರು ಮುಖ್ಯಮಂತ್ರಿಗಳ ನಿವಾಸದ ಎದುರು ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net