

Operation Sindoor: ಕಾಶ್ಮೀರ ಪಹಲ್ಗಾಮ್ ಉಗ್ರರ ದಾಳಿಗೆ ಕಡೆಗೂ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಮಂಗಳವಾರ (ಮೇ.07) ತಡರಾತ್ರಿ, ಎಲ್ಲರೂ ನಿದ್ರೆಗೆ ಜಾರಿರುವ ಸಮಯದಲ್ಲೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಶಿಬಿರಗಳ ಮೇಲೆ 'ಆಪರೇಷನ್ ಸಿಂದೂರ್' ಹೆಸರಿನಡಿ ಭಾರತೀಯ ಸೇನೆ ದಾಳಿ ನಡೆಸಿತು. ಈ ದಾಳಿಯಲ್ಲಿ ಸುಮಾರು 9 ಉಗ್ರರ ನೆಲೆಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ.
ಭಾರತದ ಗಡಿಯನ್ನು ಮೀರಿ 100 ಕಿಲೋಮೀಟರ್ ದೂರ ಹೋಗಿ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಛಿದ್ರಗೊಳಿಸಿರುವ ಆಪರೇಷನ್ ಸಿಂಧೂರ ದಾಳಿ, ಪಾಕಿಸ್ತಾನಕ್ಕೆ ತಕ್ಕ ಉತ್ತರ ಹಾಗೂ ಎಚ್ಚರಿಕೆಯ ಸಂದೇಶ ರವಾನಿಸಿದೆ. ಧ್ವಂಸಗೊಂಡ ಉಗ್ರರ ಶಿಬಿರಗಳ ಪೈಕಿ ಐದು ಪಿಒಕೆ ಮತ್ತು ನಾಲ್ಕು ಪಾಕಿಸ್ತಾನದಲ್ಲಿವೆ ಎಂದು ವರದಿ ಉಲ್ಲೇಖಿಸಿವೆ. ಟಾರ್ಗೆಟ್ ಯಶಸ್ವಿಗೊಳ್ಳಲು ಭಾರತ, 24 ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿದೆ. ದಾಳಿಯಲ್ಲಿ 80 ಉಗ್ರರು ಸಾವನ್ನಪ್ಪಿದ್ದು, 60 ಮಂದಿ ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನೆ ಮಾಹಿತಿ ಹಂಚಿಕೊಂಡಿದೆ.
ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೊಯ್ಬಾ, ಬಹವಾಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಸುಭಾನ್ ಅಲ್ಲಾ, ತೆಮ್ರಾ ಕಲಾನ್‌ನಲ್ಲಿರುವ ಜೈಶ್-ಎ-ಮೊಹಮ್ಮದ್, ಸಿಯಾಲ್‌ಕೋಟ್‌ನಲ್ಲಿರುವ ಹಿಜ್ಬುಲ್ ಮುಜಾಹಿದ್ದೀನ್ ಮೊಹ್ಮುನಾ ಜೋಯಾ, ಬರ್ನಾಲಾದ ಲಷ್ಕರ್-ಎ-ತೊಯ್ಬಾ ಅಹ್ಲೆ ಹದೀಸ್, ಕೋಟ್ಲಿಯಲ್ಲಿರುವ ಜೈಶ್-ಎ-ಮೊಹಮ್ಮದ್ ಅಬ್ಬಾಸ್, ಕೋಟ್ಲಿಯ ಹಿಜ್ಬುಲ್ ಮುಜಾಹಿದ್ದೀನ್, ಮುಜಫರಾಬಾದ್‌ನ ಸವಾಯಿ ನಾಲಾದಲ್ಲಿರುವ ಲಷ್ಕರ್ ಮತ್ತು ಮುಜಫರಾಬಾದ್‌ನಲ್ಲಿರುವ ಸೈಯದ್ ನಾ ಬಿಲಾಲ್ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತು. ಈ ದಾಳಿಯಲ್ಲಿ ಬಹುತೇಕ ಕಟ್ಟಡಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ.
ಉಗ್ರರ ನೆಲೆಗಳು ಛಿದ್ರಗೊಂಡಿರುವ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿದ್ದು, ಪಹಲ್ಗಾಮ್ ಉಗ್ರರ ದಾಳಿಗೆ ಭಾರತ ತಕ್ಕ ಪ್ರತೀಕಾರ ತೀರಿಸಿಕೊಂಡಿದೆ. ತಮ್ಮ ದೇಶದ ಜನರು ಭಾರತೀಯ ಸೇನೆಗೆ ತುತ್ತಾದ ವಿಷಯ ಕೇಳಿ ಕೆಂಡಾಮಂಡಲಗೊಂಡಿರುವ ಪಾಕ್, ಇದೀಗ ಭಾರತದ ವಿರುದ್ಧ ತನ್ನ ಷಡ್ಯಂತ್ರ ಹೆಣೆಯಲು ತಯಾರಾಗಿದೆ. ಈ ಕುರಿತಾಗಿ ಗುಪ್ತಚರ ಇಲಾಖೆಗಳು ಮಾಹಿತಿ ಹಂಚಿಕೊಂಡಿವೆ,(ಏಜೆನ್ಸೀಸ್).