

ನವದೆಹಲಿ: ಯುದ್ಧಪೀಡಿತ ಇಸ್ರೇಲ್ನಿಂದ 197 ಭಾರತೀಯರನ್ನು ಸುರಕ್ಷಿತವಾಗಿ ಹೊತ್ತು ಸಾಗಿದ ಮೂರನೇ ವಿಶೇಷ ವಿಮಾನ ಇಂದು ಮುಂಜಾನೆ ದೆಹಲಿಗೆ ಬಂದಿಳಿಯಿತು. ಪ್ಯಾಲೆಸ್ತೀನ್ನ ಹಮಾಸ್ ಉಗ್ರರ ದಾಳಿಯ ಬಳಿಕ ಇಸ್ರೇಲ್-ಹಮಾಸ್ ನಡುವೆ ಆರಂಭವಾದ ಯುದ್ಧ ಒಂದು ವಾರ ಕಳೆದರೂ ಕದನ ಕಾರ್ಮೋಡ ಇನ್ನು ತಿಳಿಯಾಗಿಲ್ಲ. ಯುದ್ಧದ ಭೀತಿ ಮುಂದುವರಿದಿದ್ದು, ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ಕೇಂದ್ರ ಸರ್ಕಾರ ಆಪರೇಷನ್ ಅಜಯ್ ಹೆಸರಿನಲ್ಲಿ ಸುರಕ್ಷಿತವಾಗಿ ತವರಿಗೆ ಕರೆತರುತ್ತಿದೆ.
ಇಂದು ಮುಂಜಾನೆ ದೆಹಲಿ ಇಂದರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 197 ಭಾರತೀಯರನ್ನು ಹೊತ್ತ 3ನೇ ವಿಮಾನ ಬಂದಿಳಿಯಿತು. ಈ ವೇಳೆ ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರು ವಿಮಾನ ನಿಲ್ದಾಣದಲ್ಲಿ ಹಾಜರಿದ್ದು, ತಾಯ್ನಾಡಿಗೆ ಮರಳಿದ ಭಾರತೀಯರಿಗೆ ಭಾರತದ ಬಾವುಟವನ್ನು ಕೊಟ್ಟು ಆತ್ಮೀಯವಾಗಿ ಬರಮಾಡಿಕೊಂಡರು.
ಸಂಘರ್ಷ ಪೀಡಿತ ಇಸ್ರೇಲ್ನಿಂದ ಸುರಕ್ಷಿತವಾಗಿ ಬಂದ ಭಾರತೀಯರು ಸರ್ಕಾರಕ್ಕೆ ಧನ್ಯವಾದ ಹೇಳಿದರು. ನಾವು ಭಾರತ ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ. ನಾವು ಇಸ್ರೇಲ್ನಲ್ಲಿ ಭಯಭೀತರಾಗಿದ್ದೆವು. ಆಪರೇಷನ್ ಅಜಯ್ ಕಾರ್ಯಾಚರಣೆಗಾಗಿ ನಾವು ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು 197 ಭಾರತೀಯರು ವಿಮಾನದ ಒಳಗಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಸ್ವದೇಶಕ್ಕೆ ಹಿಂತಿರುಗುವ ಮುನ್ನ 'ಭಾರತ್ ಮಾತಾ ಕಿ ಜೈ' ಮತ್ತು 'ವಂದೇ ಮಾತರಂ' ಎಂದು ಘೋಷಣೆಗಳನ್ನು ಭಾರತೀಯರು ಕೂಗಿದ್ದಾರೆ.
ಮೊದಲ ವಿಮಾನದಲ್ಲಿ 212 ಮಂದಿ ಹಾಗೂ ಎರಡನೇ ವಿಮಾನದಲ್ಲಿ 235 ಮಂದಿ ಸ್ವದೇಶಕ್ಕೆ ಹಿಂತಿರುಗಿದ್ದಾರೆ. ಇದೀಗ ಮೂರನೇ ವಿಮಾನದಲ್ಲಿ 197 ಮಂದಿ ವಾಪಾಸ್ಸಾಗಿದ್ದು, ಆಪರೇಷನ್ ಅಜಯ್ ಮುಂದುವರಿದಿದೆ. ಇಸ್ರೇಲ್ನಲ್ಲಿ 17 ಸಾವಿರ ಭಾರತೀಯರು ನೆಲೆಸಿದ್ದಾರೆ.
ಇಸ್ರೆಲ್ನ ಟೆಲ್ ಅವೀವ್ನಲ್ಲಿರುವ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದೆ. ಈ ಬೆನ್ ಗುರಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಸ್ರೇಲ್ನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ಲಾಡ್ ನಗರದ ಉತ್ತರ ಹೊರವಲಯದಲ್ಲಿದೆ. ಭಾರತೀಯರ ರಕ್ಷಣೆಗಾಗಿ ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಿಷನ್ ಡೇಟಾಬೇಸ್ ಅನ್ನು ಆರಂಭಿಸಿತು. ಅದರಲ್ಲಿ ಯಾರು ಮೊದಲು ನೋಂದಾಯಿಸಿಕೊಂಡರೋ ಅವರಿಗೆ ಮೊದಲ ಹಂತದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಪ್ರಯಾಣದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ.
ಭಾರತೀಯರಿಗೆ ಸಹಾಯವಾಣಿ
ಇಸ್ರೇಲ್ – ಹಮಾಸ್ ಯುದ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತೀಯರಿಗೆ ನೆರವು ನೀಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ 24 ಗಂಟೆಗಳ ಸಹಾಯ ವಾಣಿ ಸ್ಥಾಪಿಸಿದೆ. 1800118797 (ಟೋಲ್ ಫ್ರೀ), +91-11 23012113, +91-11-23014104, +91-11-23017905 ಮತ್ತು +919968291988ಗೆ ಸಂಪರ್ಕ ಮಾಡಬಹುದು. ಅಥವಾ room.gov ಗೆ ಇ ಮೇಲ್ ಮಾಡಬಹುದು. ಟೆಲ್ ಅವಿವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹ 24 ಗಂಟೆಗಳ ಸಹಾಯವಾಣಿ ಸ್ಥಾಪಿಸಿದೆ. ಅಗತ್ಯ ಇರುವವರು +972- 35226748, +972-543278392ಗೆ ಸಂರ್ಪಸಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್- ಪ್ಯಾಲೆಸ್ತೀನ್ ವಿವಾದವೇನು?
ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ದೇಶಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.
ಗಾಜಾ ಪಟ್ಟಿ ಎಂದರೇನು? : ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ. (ಏಜೆನ್ಸೀಸ್)