

ಮುಂಬೈ: 'ಶೇರ್ಷಾ' ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಪ್ರೀತಿಸುತ್ತಿರುವುದು, ಮದುವೆಯಾಗುತ್ತಿರುವುದು ಯಾವುದೂ ಬಾಲಿವುಡ್ ಮಂದಿಗೆ ಹೊಸ ವಿಷಯವಾಗಿ ಉಳಿದಿಲ್ಲ. ಇವೆಲ್ಲವೂ ಹಳೆಯದಾಗಿದ್ದು, ಅವರಿಬ್ಬರ ಮದುವೆ ಯಾವಾಗಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ, ಸಿದ್ಧಾರ್ಥ್ ಮತ್ತು ಕಿಯಾರಾ ಮಾತ್ರ ಮದುವೆ ಬಗ್ಗೆ ಯಾವೊಂದು ರಹಸ್ಯವನ್ನೂ ಬಿಟ್ಟುಕೊಡುತ್ತಿಲ್ಲ.
ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾನಿ, ಫೆಬ್ರವರಿಯಲ್ಲಿ ಮದುವೆ ಆಗುತ್ತಿದ್ದಾರಂತೆ. ಆದರೆ, ಎಲ್ಲಿ? ಯಾವತ್ತು? ಎಂಬ ಮಾಹಿತಿ ರಹಸ್ಯವಾಗಿಯೇ ಉಳಿದಿದೆ. ಆದರೆ, ಈ ಮಧ್ಯೆ ಈ ಮದುವೆ ಕುರಿತು ಒಂದು ವಿಷಯ ಹೊರಬಿದ್ದಿದೆ. ಅದೇನೆಂದರೆ, ಈ ಮದುವೆ ಬರೀ ಆಪ್ತರಿಗಷ್ಟೇ ಸೀಮಿತವಾಗಿದ್ದು, ಎರಡೂ ಕಡೆಯವರಿಂದ ಸೇರಿ ಕೇವಲ 100 ಮಂದಿ ಮಾತ್ರ ಹಾಜರಿರುತ್ತಾರೆ ಎಂದು ಹೇಳಲಾಗಿದೆ.
ಇನ್ನು, ಈ 100 ಜನರ ಪೈಕಿ ಬಾಲಿವುಡ್ನಿಂದ ಆಹ್ವಾನವಿರುವುದು ಕೇವಲ ಇಬ್ಬರಿಗೆ ಮಾತ್ರವಂತೆ. ಒಬ್ಬರು ಕರಣ್ ಜೋಹರ್ ಆದರೆ, ಇನ್ನೊಬ್ಬರು ನಿರ್ಮಾಪಕಿ ಅಶ್ವಿನಿ ವರ್ಧಿ. ಈ ಇಬ್ಬರನ್ನು ಮಾತ್ರ ಈ ಜೋಡಿ ಮದುವೆಗೆ ಆಹ್ವಾನಿಸಿದೆ ಎಂಬ ಸುದ್ದಿ ಇದೆ. ಬೇರೆ ನಟ-ನಟಿಯರಂತೆ ಸಿದ್ಧಾರ್ಥ್ ಮತ್ತು ಕಿಯಾರಾ ಸಹ ಮದುವೆಯ ನಂತರ ಬಾಲಿವುಡ್ ಮಂದಿಗೆ ಆರತಕ್ಷತೆ ಇಟ್ಟುಕೊಂಡಿದ್ದು ಆ ಆರತಕ್ಷತೆಯ ಸ್ಥಳ ಮತ್ತು ದಿನಾಂಕದ ಬಗ್ಗೆಯೂ ಇನ್ನೂ ಮಾಹಿತಿ ಹೊರಬಿದ್ದಿಲ್ಲ.
ಒಟ್ಟಾರೆ, ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾನಿ ಮದುವೆ ಸದ್ಯ ಬಾಲಿವುಡ್ನಲ್ಲಿ ಸಖತ್ ಸುದ್ದಿಯಾಗುತ್ತಿದ್ದು, ಈ ಮದುವೆಯ ಬಗ್ಗೆ ಎಕ್ಸ್ಕ್ಲೂಸಿವ್ ಮಾಹಿತಿ ಕೊಡುವುದಕ್ಕೆ ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಯಾರಿಗೂ ಮಾಹಿತಿ ಸಿಗುತ್ತಿಲ್ಲ ಎನ್ನುವುದು ವಿಶೇಷ.