

ಬೆಂಗಳೂರು: ಗಣೇಶ್ ಅಭಿನಯದ 'ಬಾನದಾರಿಯಲಿ' ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಕಳೆದ ವರ್ಷವೇ ಮುಗಿದಿದೆ. ಇನ್ನು, ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಮೊದಲ ಹಂತವಾಗಿ ಚಿತ್ರದ ಒಂದು ಹಾಡು ಬುಧವಾರ ಬಿಡುಗಡೆಯಾಗಿದೆ.
'ನಿನ್ನನ್ನು ನೋಡಿದ ನಂತರ ...' ಎಂದು ಸಾಗುವ ಈ ಹಾಡನ್ನು ಕವಿರಾಜ್ ಬರೆದಿದ್ದು, ಸೋನು ನಿಗಮ್ ಧ್ವನಿಯಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಯೂಟ್ಯೂಬ್ನ ಆನಂದ್ ಆಡಿಯೋ ಚಾನಲ್ನಲ್ಲಿ ಈ ಹಾಡು ಬಿಡುಗಡೆಯಾಗಿದೆ.
'ಬಾನ ದಾರಿಯಲಿ' ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, 'ಇದು ಕರೊನಾ ಸಮಯದಲ್ಲಿ ನಾನು ಹಾಗೂ ಪ್ರೀತಾ ಜಯರಾಂ ಸೇರಿ ಮಾಡಿದ ಕಥೆ. ಈಗ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುತ್ತಿದ್ದೇವೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ' ಎನ್ನುತ್ತಾರೆ ಪ್ರೀತಂ ಗುಬ್ಬಿ.
ಗಣೇಶ್ ಅವರ ವೃತ್ತಿಜೀವನದಲ್ಲೇ ಅತೀ ಹೆಚ್ಚು ಮೊತ್ತಕ್ಕೆ ಈ ಚಿತ್ರದ ಹಾಡುಗಳ ಹಕ್ಕುಗಳು ಮಾರಾಟವಾಗಿವೆಯಂತೆ. ಅದಕ್ಕಾಗಿ ಆನಂದ್ ಆಡಿಯೋದವರಿಗೆ ಥ್ಯಾಂಕ್ಸ್ ಹೇಳುತ್ತಲೇ ಮಾತು ಶುರು ಮಾಡುವ ಗಣೇಶ್, 'ನನ್ನ ಸಿನಿಜರ್ನಿಯಲ್ಲೇ ಅತೀ ಹೆಚ್ಚು ಮೊತ್ತ ಕೊಟ್ಟು ಈ ಚಿತ್ರದ ಆಡಿಯೋ ರೈಟ್ಸ್ ಪಡೆದುಕೊಂಡಿದ್ದಾರೆ ಆನಂದ್ ಆಡಿಯೋದವರು. ಇನ್ನು, 'ಹುಡುಗಾಟ' ಚಿತ್ರದ 'ಮಂದಾಕಿನಿಯೇ' ಹಾಡಿನಿಂದ ಶುರುವಾದ ನಮ್ಮ ಜರ್ನಿ ಈ ಹಾಡಿನ ತನಕ ಮುಂದುವರೆದಿದೆ. ನನ್ನ ಅನೇಕ ಹಿಟ್ ಹಾಡುಗಳನ್ನು ಕವಿರಾಜ್ ಅವರೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರದ ಮತ್ತೊಂದು ಹೈಲೆಟ್' ಎಂದು ಹಾಡಿ ಹೊಗಳುತ್ತಾರೆ.
'ಸಾಮಾನ್ಯವಾಗಿ ನಾನು ಡಬ್ಬಿಂಗ್ ಸಮಯದಲ್ಲಿ ಚಿತ್ರದ ಬಗ್ಗೆ ಹೇಳಿ ಬಿಡುತ್ತೇನೆ. ಈ ಚಿತ್ರದ ಡಬ್ಬಿಂಗ್ ಮಾಡಬೇಕಾದರೆ ಕೆಲವೊಮ್ಮೆ ತುಂಬಾ ಭಾವುಕನಾದೆ. ನಾಯಕಿಯರಾದ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಪ್ರೀತಾ ಜಯರಾಮ್ ಮತ್ತು ಪ್ರೀತಂ ಗುಬ್ಬಿ ಸೇರಿ ಒಳ್ಳೆಯ ಕಥೆ ಬರೆದಿದ್ದಾರೆ. ಕೀನ್ಯಾ ಭಾಗದ ಚಿತ್ರೀಕರಣವನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಈ ಚಿತ್ರದಲ್ಲಿ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಂಡಿದ್ದೇನೆ' ಎಂದು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ಗಣೇಶ್.
'ಬಾನದಾರಿಯಲಿ' ಚಿತ್ರದಲ್ಲಿ ಗಣೇಶ್ಗೆ ನಾಯಕಿಯರಾಗಿ ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಂತೋಷ್ ಹಾಗೂ ವೇಣು ಬಂಡವಾಳ ಹೂಡಿದ್ದಾರೆ.