ಮತ್ತೆ ಒಂದಾಗ್ತಾರಾ ವಿಜಯ್​ ದೇವರಕೊಂಡ, ರಶ್ಮಿಕಾ ಮಂದಣ್ಣ?

Vijay Devarakonda - Rashmika Mandanna 1
Published on

ಹೈದರಾಬಾದ್​: ಟಾಲಿವುಡ್​ನ ಜನಪ್ರಿಯ ಜೋಡಿಗಳಲ್ಲಿ ವಿಜಯ್​ ದೇವರಕೊಂಡ, ರಶ್ಮಿಕಾ ಜೋಡಿ ಸಹ ಒಂದು. ಈ ಜೋಡಿ 'ಗೀತ ಗೋವಿಂದಂ' ಮತ್ತು 'ಡಿಯರ್​ ಕಾಮ್ರೇಡ್​' ಚಿತ್ರಗಳಲ್ಲಿ ನಟಿಸಿದ್ದಾರೆ. ಆ ನಂತರ ಅವರಿಬ್ಬರೂ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆಯಾದರೂ, ಇಬ್ಬರೂ ತಾವು ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡೇ ಬರುತ್ತಿದ್ದಾರೆ.

ವಿಜಯ್​ ಮತ್ತು ರಶ್ಮಿಕಾ ತಾವಿಬ್ಬರೂ ಸ್ನೇಹಿತರು ಎಂದು ಎಷ್ಟೇ ಹೇಳಿಕೊಂಡರೂ, ಮಂದಿ ಅದನ್ನು ನಂಬುವುದಕ್ಕೆ ಸಿದ್ಧರಿಲ್ಲ. ಕಾರಣ, ಅವರಿಬ್ಬರ ಒಡನಾಟ ಮತ್ತು ಸುತ್ತಾಟ. ಇತ್ತೀಚೆಗೆ ಇಬ್ಬರೂ ಹೊಸ ವರ್ಷಕ್ಕೆ ವಿದೇಶಕ್ಕೆ ಹೋಗಿ ಬಂದಿದ್ದರು. ಇನ್ನು, 2022ರಲ್ಲಿ ಹೊಸ ವರ್ಷಕ್ಕೆ ಇಬ್ಬರೂ ಗೋವಾದಲ್ಲಿದ್ದರು. ಹಾಗಾಗಿ, ಅವರಿಬ್ಬರೂ ಬರೀ ಸ್ನೇಹಿತರಷ್ಟೇ ಅಲ್ಲ, ಅವರಿಬ್ಬರ ನಡುವೆ ಇನ್ನೂ ಏನೋ ಇದೆ ಎಂಬ ಗುಮಾನಿ ಎಲ್ಲರಲ್ಲೂ ಇದೆ.

ಈ ಮಧ್ಯೆ, 'ಗೀತ ಗೋವಿಂದಂ' ಮತ್ತು 'ಡಿಯರ್​ ಕಾಮ್ರೇಡ್​' ಚಿತ್ರಗಳ ನಂತರ ಅವರಿಬ್ಬರೂ ಇನ್ನೊಂದು ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ಈ ವರ್ಷ ಅವರಿಬ್ಬರೂ ಮತ್ತೊಮ್ಮೆ ತೆರೆಯ ಮೇಲೆ ಒಂದಾಗಲಿದ್ದಾರೆ ಎಂಬ ಸುದ್ದಿ ಇದೆ. ಈ ಬಗ್ಗೆ ರಶ್ಮಿಕಾ ಅವರನ್ನು ಕೇಳಿದರೆ ನೋ ಎಂಬ ಉತ್ತರ ಬರುತ್ತದೆ.

ಇತ್ತೀಚೆಗೆ, ಈ ಕುರಿತು ಮಾತನಾಡಿರುವ ಅವರು, 'ಸದ್ಯಕ್ಕಂತೂ ಆ ತರಹ ಯಾವುದೇ ಆಫರ್​ಗಳಿಲ್ಲ. ಈ ವರ್ಷವೋ, ಮುಂದಿನ ವರ್ಷವೋ ನಾವಿಬ್ಬರೂ ಮತ್ತೊಮ್ಮೆ ಒಟ್ಟಿಗೆ ನಟಿಸುತ್ತೇವೆ ಎಂಬ ವಿಶ್ವಾಸವಿದೆ. ಬಹಳಷ್ಟು ಹಿತೈಷಿಗಳು ನಾವಿಬ್ಬರೂ ಇನ್ನೊಮ್ಮೆ ಒಟ್ಟಿಗೆ ನಟಿಸಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಅಂಥ ಕಥೆ ಯಾವುದೂ ಬಂದಿಲ್ಲ. ನಮ್ಮಿಬ್ಬರಿಗೂ ಸರಿ ಹೊಂದುವಂತಹ ಸ್ಕ್ರಿಪ್ಟ್​ ಬಂದರೆ, ಖಂಡಿತಾ ನಟಿಸುತ್ತೇವೆ' ಎಂದಿದ್ದಾರೆ ರಶ್ಮಿಕಾ ಮಂದಣ್ಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net