ಡಾಲಿ ಗೆಳೆಯರ ಬಳಗದಿಂದ 'ಆರ್ಕೆಸ್ಟ್ರಾ ಮೈಸೂರು'

Orchestra Mysore Trailer 1
Published on

ಬೆಂಗಳೂರು: ಕರ್ನಾಟಕದಲ್ಲಿ ಆರ್ಕೆಸ್ಟ್ರಾ ಮೊದಲು ಪ್ರಾರಂಭವಾಗಿದ್ದು ಮೈಸೂರಿನಲ್ಲಿ ಎಂಬ ಮಾತಿದೆ. ಗಣೇಶನ ಹಬ್ಬ, ರಾಜ್ಯೋತ್ಸವ ಮುಂತಾದ ಸಂದರ್ಭಗಳಲ್ಲಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುವ ಆರ್ಕೆಸ್ಟ್ರಾಗಳ ಕುರಿತು ಕನ್ನಡದಲ್ಲಿ ಸದ್ದಿಲ್ಲದೆ ಚಿತ್ರ ನಿರ್ಮಾಣವಾಗಿದೆ. ಅದೇ 'ಆರ್ಕೆಸ್ಟ್ರಾ ಮೈಸೂರು'.

ಡಾಲಿ ಧನಂಜಯ್​ ಗೆಳೆಯರ ಬಳಗದ ಹುಡುಗರು ಸೇರಿ ಮಾಡಿರುವ ಈ ಚಿತ್ರವು ಜನವರಿ 12

ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಇತ್ತೀಚೆಗೆ ಟ್ರೈಲರ್​ ಬಿಡುಗಡೆಯಾಗಿದೆ.

ಧನಂಜಯ್​ ಈ ಚಿತ್ರದ ಬೆನ್ನೆಲುಬು ಎನ್ನುವುದರ ಜತೆಗೆ, ಈ ಚಿತ್ರಕ್ಕೆ ಎಲ್ಲ ಹಾಡುಗಳನ್ನೂ ಬರೆದಿದ್ದಾರೆ. ಚಿತ್ರದ ಕುರಿತು ಮಾತನಾಡುವ ಅವರು, 'ನಮ್ಮ ಮೈಸೂರಿನ ಅನೇಕ ಸ್ನೇಹಿತರು ಸೇರಿ ಮಾಡಿರುವ ಚಿತ್ರವಿದು. ಸುನೀಲ್ ಮೈಸೂರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಪೂರ್ಣಚಂದ್ರ ನಾಯಕನಾಗಿ ನಟಿಸಿದ್ದಾರೆ‌. ನಾನು ಈ ಚಿತ್ರದ ಎಲ್ಲಾ ಹಾಡುಗಳನ್ನು ಬರೆದಿದ್ದೇನೆ.‌ ನಾನು ಡಾಲಿ ಆಗುವುದಕ್ಕೆ ಮುಂಚಿತವಾಗಿ ಈ ಚಿತ್ರದ ಹಾಡುಗಳನ್ನು ಬರೆದಿದ್ದೇನೆ. ಈ ಚಿತ್ರದಲ್ಲಿ ನಾಯಕ ಗೆಲುವನ್ನು ಸಂಭ್ರಮಿಸುವ ಹಾಡೊಂದನ್ನು ಬರೆಯಬೇಕಿತ್ತು. ನನಗೆ ಆಗ ಆ ಗೆಲುವನ್ನು ಸಂಭ್ರಮಿಸಿ ಗೊತ್ತಿರಲಿಲ್ಲ.‌ ಆನಂತರ 'ಟಗರು' ಚಿತ್ರದ ಯಶಸ್ಸಿನ ನಂತರ ಈ ಹಾಡನ್ನು ಪೂರ್ಣ ಮಾಡಿದೆ. ಡಾಲಿ ಪಿಕ್ಚರ್ಸ್ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ಈ ಚಿತ್ರವನ್ನು ಅರ್ಪಿಸುತ್ತಿದೆ. ಅಶ್ವಿನ್ ವಿಜಯ್ ಕುಮಾರ್ ಹಾಗೂ ರಘು ದೀಕ್ಷಿತ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ' ಎಂದು ಮಾಹಿತಿ ಕೊಟ್ಟರು.

2015ರಲ್ಲಿ 'ಬಾರಿಸು ಕನ್ನಡ ಡಿಂಡಿಮವ' ಮೈಸೂರಿನ ಗೆಳೆಯರೆಲ್ಲ ಸೇರಿ ಮಾಡಿದ್ದರು. ಈ ಹಾಡಿನ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿತ್ತು. ಈ ಹಾಡಿಗೆ ಸಿಕ್ಕ ಬೆಂಬಲವೇ ಈ ಚಿತ್ರ ನಿರ್ಮಾಣಕ್ಕೆ ಸ್ಫೂರ್ತಿಯಂತೆ. 'ಆರ್ಕೆಸ್ಟ್ರಾದಲ್ಲಿ ಹಾಡಬೇಕೆಂದು ಆಸೆ ಹೊತ್ತ ಹುಡುಗನ ಕನಸು ನನಸಾಗುವುದಾ? ಎಂಬುದೆ ಚಿತ್ರದ ಮೂಲ ಕಥೆ. ಬೆಂಗಳೂರಿನ ಹಾಗೆ ಮೈಸೂರಿನಲ್ಲೂ ಒಂದು ಗಾಂಧಿನಗರವಿದೆ. ಅಲ್ಲಿ ಸಾಕಷ್ಟು ಆರ್ಕೆಸ್ಟ್ರಾ ಕಂಪನಿಗಳೂ ಇದೆ. ಈ ಆರ್ಕೆಸ್ಟ್ರಾಗಳ ಸುತ್ತ ಈ ಕಥೆ ಸಾಗುತ್ತದೆ. ಒಂದು ಹಾಡಿನಲ್ಲಿ 15 ಸಾವಿರಕ್ಕೂ ಹೆಚ್ಚಿನ ಜನ ಭಾಗಿಯಾಗಿದ್ದಾರೆ' ಎನ್ನುತ್ತಾರೆ ಸುನೀಲ್​.

ಚಿತ್ರದಲ್ಲಿ ನಾಯಕನಾಗಿ ಪೂರ್ಣಚಂದ್ರ ಮೈಸೂರು ನಟಿಸಿದ್ದಾರೆ. 'ನಮ್ಮ ಸಿನಿಮಾ ಕನಸಿನ ಜರ್ನಿ ಶುರುವಾಗಿದ್ದು 15 ವರ್ಷದ ಹಿಂದೆ. ನಾವು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ದಿನಗಳಲ್ಲಿ ನಾವೆಲ್ಲಾ ಬೆಂಗಳೂರಿಗೆ ಹೋಗಿ ಸಿನಿಮಾ ಮಾಡಲು ಆಗುವುದಾ? ಎಂದು ಯೋಚಿಸುತ್ತಿದ್ದೆವು. ಆ ಪೈಕಿ ನಮ್ಮ ಚಿತ್ರದಲ್ಲಿ ನಟಿಸಲು ಮೊದಲು ಬೆಂಗಳೂರಿಗೆ ಬಂದಿದ್ದು ಸ್ನೇಹಿತ ಧನಂಜಯ್ ‌. ಆನಂತರ 'ಆರ್ಕೆಸ್ಟ್ರಾ ಮೈಸೂರು' ಚಿತ್ರ ಆರಂಭವಾಯಿತು. ಇಡೀ ಮೈಸೂರಿನಲ್ಲಿ ನಮ್ಮ ಚಿತ್ರದ ಚಿತ್ರೀಕರಣ ನಡೆದಿದೆ. ಕಥೆ ಕೇಳಿದ ರಘು ದೀಕ್ಷಿತ್ ನಮ್ಮ ಬೆಂಬಲಕ್ಕೆ ನಿಂತರು. ಡಾಲಿ ಪಿಕ್ಚರ್ಸ್ ಹಾಗೂ ಕೆ.ಆರ್.ಜಿ ಸ್ಟುಡಿಯೋಸ್ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ' ಎನ್ನುತ್ತಾರೆ ಪೂರ್ಣಚಂದ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net