

ಬೆಂಗಳೂರು: 2012ರ 19 ವಯೋಮಿತಿ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಸ್ಮಿತ್ ಪಟೇಲ್ ಇದೀಗ ಬಿಸಿಸಿಐನಿಂದ ಸಂಬಂಧ ಕಡಿತಗೊಂಡಿದ್ದು, ಅಮೆರಿಕದಲ್ಲಿ ತಮ್ಮ ವೃತ್ತೀಜಿವನ ಮುಂದುವರಿಸಲು ತೀರ್ಮಾನಿಸಿದ್ದಾರೆ. ಇದರ ಮೊದಲ ಭಾಗದ ಅಂಗವಾಗಿ ಮುಂಬರುವ ಕೆರಿಬಿಯನ್ ಪ್ರಿಮಿಯರ್ ಲೀಗ್ನಲ್ಲಿ ಬಾರ್ಬೊಡಾಸ್ ಟ್ರಿಡೆಂಟ್ಸ್ ಪರ ಆಡಲಿದ್ದಾರೆ. ನನ್ನ ಜೀವನದ ಮತ್ತೊಂದು ಇನಿಂಗ್ಸ್ ಮುಂದುವರಿಯಲಿದೆ ಎಂದು ಕ್ರಿಕೆಟ್ ವೆಬ್ಸೈಟ್ವೊಂದಕ್ಕೆ ಹೇಳಿಕೊಂಡಿದ್ದಾರೆ.
ಮೊದಲ ಬಾರಿಗೆ ವಿದೇಶಿ ಲೀಗ್ಗಳಲ್ಲಿ ಆಡುತ್ತಿರುವೆ. ಈಗಾಗಲೇ ವಾರಾಂತ್ಯದಲ್ಲಿ ಹಲವು ಕ್ಲಬ್ಗಳ ಪರ ಆಡಿರುವೆ ಎಂದು ಸ್ಮಿತ್ ಪಟೇಲ್ ತಿಳಿಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿರುವ ಮೂಲತಃ ಗುಜರಾತ್ ರಾಜ್ಯದ ಆಟಗಾರ ದೇಶೀಯ ಕ್ರಿಕೆಟ್ನಲ್ಲಿ ನೆಲೆಕಂಡುಕೊಳ್ಳಲು ನಾಲ್ಕೂ ತಂಡ ಬದಲಾಯಿಸಿದರಂತೆ. ಗುಜರಾತ್, ತ್ರಿಪುರ, ಗೋವಾ ಹಾಗೂ ಬರೋಡ ತಂಡಗಳ ಪರ ಆಡಿದ್ದಾರೆ. ಉನ್ಮುಕ್ತ್ ಚಂದ್ ಸಾರಥ್ಯದ ಭಾರತ 19 ವಯೋಮಿತಿ ತಂಡದ ಸದಸ್ಯರಾಗಿದ್ದರು. ಇದೀಗ ಸಿಪಿಎಲ್ನಲ್ಲಿ ಕಣಕ್ಕಿಳಿಯಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಮುಂಬೈ ಮೂಲದ ಪ್ರವೀಣ್ ತಂಬೆ ಸಿಪಿಎಲ್ನಲ್ಲಿ ಆಡಿದ್ದರು.
12 ವರ್ಷಗಳ ಕಾಲ ದೇಶೀಯ ಕ್ರಿಕೆಟ್ ಟೂನಿರ್ಗಳಲ್ಲಿ ಆಡಿದ ಸ್ಮಿತ್, 55 ಪ್ರಥಮ ದರ್ಜೆ ಪಂದ್ಯಗಳಿಂದ 3278 ರನ್ ಸಿಡಿಸಿದ್ದಾರೆ. ಇದರಲ್ಲಿ 11 ಶತಕ ಹಾಗೂ 14 ಅರ್ಧಶತಕ ಒಳಗೊಂಡಿವೆ.