

ಮುಂಬೈ: ಕರೊನಾ ಲಸಿಕೆಯಲ್ಲಿ ಸದ್ಯ ಭಾರಿ ಭರವಸೆ ಮೂಡಿಸಿರುವುದು ಆಕ್ಸ್ಫರ್ಡ್ ವಿವಿ ಹಾಗೂ ಆಸ್ಟ್ರಾ ಜೆನೆಕಾ ಸಹಯೋಗದ ಸಂಶೋಧನೆ. ಮಾನವರ ಮೇಲಿನ ಪ್ರಯೋಗದ ಮೊದಲ ಎರಡು ಹಂತದಲ್ಲೂ ಇದು ಪಾಸಾಗಿದೆ. ಮಾನವರ ಬಳಕೆಗೆ ಸುರಕ್ಷಿತ ಎಂದು ಹೇಳಲಾಗಿದೆ. ಈಗ ಮೂರನೇ ಹಂತದಲ್ಲಿ ಸಾವಿರಾರು ಜನರ ಮೇಲೆ ಪ್ರಯೋಗ ನಡೆಸಲಾಗುತ್ತಿದೆ.
ಎಲ್ಲವೂ ಅಂದುಕೊಂಡಂತೆ ಆದರೆ, ಸೆಪ್ಟಂಬರ್ ಅಥವಾ ವರ್ಷಾಂತ್ಯಕ್ಕೆ ಈ ಲಸಿಕೆ ರೋಗಿಗಳ ಬಳಕೆಗೆ ಮುಕ್ತವಾಗಲಿದೆ. ವಿಶೇಷವೆಂದರೆ ಇದನ್ನು ಭಾರತದಲ್ಲಿ ಪುಣೆಯ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನೆ ಮಾಡಲಿದೆ.
ಇಲ್ಲಿ ಉತ್ಪಾದನೆಯಾಗುವ ಶೇ.50 ಲಸಿಕೆ ಭಾರತೀಯರ ಬಳಕೆಗಾಗಿ ದೊರೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಆದಾರ್ ಪೂನಾವಾಲಾ ಸ್ಪಷ್ಟಪಡಿಸಿದ್ದಾರೆ. ಈ ಸಂಸ್ಥೆಯನ್ನು ಸ್ಥಾಪಿಸಿದ ಪೂನಾವಾಲಾ ಕುಟುಂಬ ಪಾರ್ಸಿ ಜನಾಂಗಕ್ಕೆ ಸೇರಿದ್ದು.
ಲಸಿಕೆ ತಯಾರಿಕೆ ಹಾಗೂ ಬೆಳವಣಿಗೆಗಳ ಬಗ್ಗೆ ಆದಾರ್ ಪೂನಾವಾಲಾ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪಾರ್ಸಿ ಜನಾಂಗದ ರೋನಿ ಸ್ಕ್ರೂವಾಲಾ ಎಂಬುವರು, ' ಪಾರ್ಸಿ ಜನಾಂಗವು ಅವನತಿಯ ಅಂಚಿನಲ್ಲಿದೆ. ಹೀಗಾಗಿ ಪಾರ್ಸಿ ಜನಾಂಗಕ್ಕಾಗಿಯೇ ಲಸಿಕೆಯನ್ನು ವಿಶೇಷ ಮೀಸಲಾತಿಯನ್ವಯ ನೀಡಲಾಗುತ್ತಿದೆ ಎಂದು ಕೇಳಿದ್ದೇನೆ. ವಿನಾಶದ ಅಂಚಿನಲ್ಲಿರುವ ಜನಾಂಗದವರು ಲಸಿಕೆ ಪಡೆಯುವಲ್ಲಿ ಮುಂಚೂಣಿಯಲ್ಲಿ ಯಾಕಿರಬಾರದು ಎಂದೂ ಲಘುದಾಟಿಯಲ್ಲಿ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪೂನಾವಾಲಾ ಹೌದು, ನಮ್ಮ ಬಳಿ ಸಾಕಷ್ಟು ಸಂಗ್ರಹವಿರಲಿದೆ. ಅಷ್ಟಕ್ಕೂ ನಮ್ಮ ಜನಸಂಖ್ಯೆಯನ್ನು ಪರಿಗಣಿಸುವುದಾದರೆ, ನಮ್ಮ ಔಷಧ ಘಟಕದ ಒಂದು ದಿನದ ಉತ್ಪಾದನೆ ಭೂಮಿಯ ಮೇಲಿರುವ ಎಲ್ಲ ಪಾರ್ಸಿಗಳಿಗೂ ಬಳಸಿ ಮಿಕ್ಕುವಷ್ಟಾಗುತ್ತದೆ ಎಂದು ಹೇಳಿದ್ದಾರೆ.
2011ರ ಜನಗಣತಿಯ ಪ್ರಕಾರ ಭಾರತದಲ್ಲಿರುವ ಪಾರ್ಸಿಗಳ ಸಂಖ್ಯೆ 57,624. ಹೀಗಾಗಿ ಪಾರ್ಸಿಗಳಿಗಾಗಿ 60 ಸಾವಿರ ಲಸಿಕೆಯನ್ನು ಮೀಸಲಿಡುವುದಾಗಿ ಪೂನಾವಾಲಾ ಒಪ್ಪಿಕೊಂಡಿದ್ದಾರೆ ಎಂದು ಪಾರ್ಸಿ ಜನಾಂಗದ ಮುಖಂಡ ದೀನ್ಷಾ ಮೆಹ್ತಾ ತಿಳಿಸಿದ್ದಾರೆ.
ಇಷ್ಟಕ್ಕೂ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಔಷಧ ತಯಾರಿಕೆಯ ಜಗತ್ತಿನ ಅತಿ ದೊಡ್ಡ ಘಟಕವಾಗಿದೆ. ಒಂದು ತಿಂಗಳಿಗೆ 7 ಕೋಟಿ ಡೋಸ್ಗೂ ಅಧಿಕ ಲಸಿಕೆ ತಯಾರಿಸುವ ಸಾಮರ್ಥ್ಯ ಹೊಂದಿದೆ.