ಕರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದ ಕಂಪನಿಗೆ ಇದೆಂಥ ಹಿನ್ನಡೆ?

Moderna
Published on

ನವದೆಹಲಿ: ಕರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿ ಕಂಪನಿಗೆ ಪೇಟೆಂಟ್​ ವಿಚಾರದಲ್ಲಿ ಭಾರಿ ಹಿನ್ನಡೆಯುಂಟಾಗಿದೆ.

ಕರೊನಾ ಲಸಿಕೆ ಸೇರಿ ಭವಿಷ್ಯದಲ್ಲಿ ಉತ್ಪಾದಿಸಲಾಗುವ ಇತರ ಔಷಧಗಳ ತಯಾರಿಗೆ ಅತ್ಯಂತ ಮುಖ್ಯವಾಗಿದ್ದ ಪೇಟೆಂಟ್​ ವಿವಾದದಲ್ಲಿ ಅಮೆರಿಕದ ಮಾಡೆರ್ನಾ ಕಂಪನಿ ಸೋಲು ಕಂಡಂತಾಗಿದೆ.

ಮಾಡೆರ್ನಾ ಕಂಪನಿಯು ಆರ್ಬಟಸ್​ ಸಂಸ್ಥೆ ಹೊಂದಿದ್ದ ಹಾಗೂ 069 ಎಂದೇ ಹೆಸರಾಗಿದ್ದ ಪೇಟೆಂಟ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಅದನ್ನು ಹಿಂಪಡೆಯಬೇಕೆಂದು ವಾದ ಮಂಡಿಸಿತ್ತು. ಆದರೆ, ಇದನ್ನು ಅಮೆರಿಕದ ಪೇಟೆಂಟ್​ ಹಾಗೂ ಟ್ರೇಡ್​ ಮಾರ್ಕ್​ ಇಲಾಖೆಯ ನ್ಯಾಯಾಲಯ ತಿರಸ್ಕರಿಸಿದೆ.

069 ಪೇಟೆಂಟ್​ ಲಿಪಿಡ್​ ನ್ಯಾನೋ ಪಾರ್ಟಿಕಲ್​ (ಎಲ್​ಎನ್​ಪಿ) ಟೆಕ್ನಾಲಜಿಗೆ ಸಂಬಂಧಿಸಿದ್ದಾಗಿದೆ. ಇದು ಮಾಡೆರ್ನಾದ ಕರೊನಾ ಲಸಿಕೆ ಅಭಿವೃದ್ಧಿಯಲ್ಲಿ ಅತ್ಯಂತ ಮುಖ್ಯವಾಗಿದೆ. ನ್ಯಾಯಾಲಯದ ಕ್ರಮದಿಂದಾಗಿ ಆರ್ಬಟಸ್​ ಕಂಪನಿಗೆ ಪೇಟೆಂಟ್​ ಮೊತ್ತವನ್ನು ಪಾವತಿಸಬೇಕಾದ ಒತ್ತಡಕ್ಕೆ ಮಾಡೆರ್ನಾ ಒಳಗಾಗಲಿದೆ. ಇಲ್ಲವೇ ಲಸಿಕೆ ಉತ್ಪಾದನೆಯ ನಂತರ ಆರ್ಬಟಸ್​ ಕಂಪನಿಗೆ ರಾಯಧನ ನೀಡಬೇಕಾದ ಸಂದರ್ಭವೂ ಎದುರಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಪೇಟೆಂಟ್​ ನ್ಯಾಯಾಲಯದ ಕ್ರಮದಿಂದ ಕರೊನಾ ಲಸಿಕೆ ಉತ್ಪಾದನೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಮಾಡೆರ್ನಾ ಹೇಳಿಕೊಂಡಿದೆ.

ಈ ಬೆಳವಣಿಗೆಯಿಂದಾಗಿ ಆರ್ಬಟಸ್​ ಕಂಪನಿ ಷೇರುಗಳ ಮೌಲ್ಯ ದುಪ್ಪಟ್ಟಾಗಿದ್ದರೆ, ಮಾಡೆರ್ನಾ ಕಂಪನಿ ಷೇರುಗಳು ಶೇ.9.5 ಇಳಿಕೆ ಕಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net