ನಾಪತ್ತೆಯಾಗಿದ್ದ ಪತ್ನಿಗಾಗಿ ಹುಡುಕಾಡುತ್ತಾ ಕೊನೆಗೆ ಮನೆಗೆ ಬಂದು ನೋಡಿದಾಗ ಪತಿರಾಯನಿಗೆ ಕಾದಿತ್ತು ಶಾಕ್​!

MARRIAGE
Published on

ವಡೋದರಾ: ಮದುವೆಯಾಗಿ ಗಂಡನಿಂದ ದೂರಾಗಿದ್ದ ಮಹಿಳೆಗೆ ಹೊಸ ಬಾಳು ನೀಡಿದ್ದ ವ್ಯಕ್ತಿಗೆ ಮೋಸ ಮಾಡಿ ಆಭರಣ ಮತ್ತು ನಗದು ದೋಚಿಕೊಂಡು ಮತ್ತೆ ಮಾಜಿ ಗಂಡನೊಂದಿಗೆ ಮಹಿಳೆ ಪರಾರಿಯಾಗಿರುವ ಘಟನೆ ಗುಜರಾತ್​​ನಲ್ಲಿ ನಡೆದಿದೆ.

ಸಂತ್ರಸ್ತನನ್ನು ಮೊಹಮ್ಮದ್​ ಶಕಿಲ್​ ಮನ್ಸೂರಿ ಎಂದು ಗುರುತಿಸಲಾಗಿದೆ. ಈತ ಯಕುಟ್ಪುರ ನಿವಾಸಿಯಾಗಿದ್ದು, ಸಣ್ಣದೊಂದು ಆಟೋ ಗ್ಯಾರೇಜ್ ನಡೆಸುತ್ತಿದ್ದಾನೆ. ತನ್ನ ಎರಡನೇ ಪತ್ನಿ ಇರಾಮ್​ ಮೋಸ ಮಾಡಿ ಮಾಜಿ ಗಂಡ ಸಲ್ಮಾನ್ ಸಹಬುದ್ದೀನ್​ನೊಂದಿಗೆ 2.6 ಲಕ್ಷ ರೂ. ಮೌಲ್ಯದ ಆಭರಣ ಮತ್ತು ನಗದನ್ನು ದೋಚಿ ನಾಪತ್ತೆಯಾಗಿದ್ದಾಳೆ ಎಂದು ಬುಧವಾರ ದೂರು ದಾಖಲಿಸಿದ್ದಾನೆ.

ಫೆ. 6ರಂದು ಮನೆಯಿಂದ ಎರಡನೇ ಪತ್ನಿ ಇರಾಮ್​, ನಾಪತ್ತೆಯಾಗಿರುವುದನ್ನು ಅರಿತ ಮನ್ಸೂರಿ ಆಕೆಗಾಗಿ ಹುಡುಕಾಟ ನಡೆಸಲು ಆರಂಭಿಸುತ್ತಾನೆ. ಆದರೂ, ಆಕೆಯ ಸುಳಿವು ಮಾತ್ರ ದೊರೆಯುವುದಿಲ್ಲ. ನಂತರ ಕಾರೊಂದರಲ್ಲಿ ವ್ಯಕ್ತಿಯ ಜತೆ ಇರಾಮ್​ ಇರುವುದನ್ನು ನೋಡಿದ್ದಾಗಿ ನೆರೆ ಮನೆಯವರು ಮನ್ಸೂರಿ ತಿಳಿಸುತ್ತಾರೆ. ಮೊಬೈಲ್​ ಮೂಲಕ ಸಂಪರ್ಕಿಸಲು ಯತ್ನಿಸಿದಾದರೂ ಅದು ಸ್ವಿಚ್​ ಆಫ್​ ಆಗಿರುತ್ತದೆ. ಬಹುಶಃ ಮಾಜಿ ಗಂಡನೊಂದಿಗೆ ಪರಾರಿಯಾಗಿರಬಹುದೆಂದು ಸಣ್ಣ ಸಂಶಯವೊಂದು ಮನ್ಸೂರಿಗೆ ಬರುತ್ತದೆ. ಅಲ್ಲದೆ, 2019 ನವೆಂಬರ್​ನಲ್ಲಿ ಮನ್ಸೂರಿ ಜತೆ ಎರಡನೇ ವಿವಾಹವಾದರೂ, ಸಹಬುದ್ದೀನ್ ಜತೆ ಇರಾಮ್​ ಸಂಪರ್ಕದಲ್ಲಿ ಇರುವುದು ಮನ್ಸೂರಿಗೆ ತಿಳಿದಿರುತ್ತದೆ. ಬಳಿಕ ಬಂದು ಮನೆಯನ್ನು ಹುಡುಕಾಡಿದಾಗ 1 ಲಕ್ಷ ಮೌಲ್ಯದ ಆಭರಣ ಮತ್ತು 1.2 ಲಕ್ಷ ರೂ. ನಗದು ಇಲ್ಲದಿರುವುದು ಗೊತ್ತಾಗುತ್ತದೆ. ಮಾಜಿ ಗಂಡನೊಂದಿಗೆ ಪರಾರಿಯಾಗಿರುವುದು ಮನ್ಸೂರಿಗೆ ಖಚಿತವಾಗುತ್ತದೆ.

ಬಳಿಕ ಶಕೀಲ್ ಇಂದೋರ್​ನ ಸಹಬುದ್ದೀನ್​ ಮನೆಗೆ ತೆರಳಿ ಪತ್ನಿ ಇರಾಮ್​ ಮನವೊಲಿಸುವ ಪ್ರಯತ್ನ ಮಾಡಿದಾದರೂ ಗುಜರಾತ್​ಗೆ ಮರಳಿ ಬರಲು ಆಕೆ ಒಪ್ಪಿಲ್ಲ. ನಮ್ಮ ಮಾಜಿ ಗಂಡ ಈವರೆಗೂ ನನ್ನ ಇಷ್ಟಪಡುತ್ತಿದ್ದಾನೆ. ಹೀಗಾಗಿ ಅವನೊಂದಿಗೆ ಉಳಿದುಕೊಳ್ಳುತ್ತೇನೆ ಎಂದು ಹೇಳಿ ಮನ್ಸೂರಿ ಮನವಿಯನ್ನು ತಿರಸ್ಕರಿಸಿದ್ದಾಳೆ. ಈ ರೀತಿಯ ಅನೇಕ ಪ್ರಯತ್ನ ಮಾಡಿ ಮನ್ಸೂರಿ ವಿಫಲವಾದ ನಂತರ ಎರಡನೇ ಪತ್ನಿ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿದ್ದಾನೆ.

ಪೊಲೀಸ್​ ಮೂಲಗಳ ಪ್ರಕಾರ ಮೊದಲ ಪತ್ನಿಗೆ ಮಕ್ಕಳಾಗದಿದ್ದಾಗ ಇರಾಮ್​ಳನ್ನು ನವೆಂಬರ್​ನಲ್ಲಿ ವರಿಸಿದ್ದ. ಇರಾಮ್​ ಕೂಡ ಮನ್ಸೂರಿ ಹತ್ತಿರ ಸಂಬಂಧಿಯಾಗಿದ್ದಳು. ಕುಟುಂಬದ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದರು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net