ಅಕ್ರಮ ಸಂಬಂಧಕ್ಕಾಗಿ ಪ್ರಿಯತಮನನ್ನ ತನ್ನ ಮಗಳಿಗೇ ಮದುವೆ ಮಾಡಿಸಿದ ತಾಯಿ; ಡೆತ್​ನೋಟ್​ ಬರೆದಿಟ್ಟು ಮಗಳ ಆತ್ಮಹತ್ಯೆ

Girl Sucide vvani
Published on

ಹೈದರಾಬಾದ್​: ಪ್ರಪಂಚದಲ್ಲಿ ಯಾರು ಯಾರಿಗಾದರೂ ಕೆಟ್ಟದನ್ನು ಬಯಸಬಹುದು ಆದರೆ ಹೆತ್ತ ತಾಯಿ ತನ್ನ ಮಕ್ಕಳಿಗೆ ಕೆಡುಕು ಬಯಸುವುದಿಲ್ಲ ಎನ್ನುವ ಮಾತಿದೆ. ಆದರೆ ಅಲ್ಲೊಂದು ಇಲ್ಲೊಂದು ಎನ್ನುವಂತೆ ಈ ಮಾತಿಗೆ ಅಪವಾದವೆನಿಸುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಈಗ ಅಂತದ್ದೇ ಒಂದು ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಹೈದರಾಬಾದ್​ ಮೂಲದ ಅನಿತಾ ಹೆಸರಿನ ಮಹಿಳೆಯೊಬ್ಬಳು ಗಂಡನಿಂದ ದೂರಾಗಿದ್ದು, ಪರಪುರುಷನೊಬ್ಬನೊಂದಿಗೆ (ನವೀನ್​ ಕುಮಾರ್​) ಅಕ್ರಮ ಸಂಬಂಧ ಹೊಂದಿದ್ದಳು. ಹರೆಯದ ಎರಡು ಹೆಣ್ಣು ಮಕ್ಕಳ ತಾಯಿಯಾಗಿದ್ದ ಆಕೆ ತನ್ನ ಅಕ್ರಮ ಸಂಬಂಧವನ್ನು ಯಾವುದೇ ಅಡಚಣೆಯಿಲ್ಲದೆ ಮುಂದುವರಿಸುವ ಸಲುವಾಗಿ ತನ್ನ ಮಗಳನ್ನೇ ಬಲಿ ಕೊಡಲು ನಿರ್ಧಾರ ಮಾಡಿದ್ದಳು. ಆಕೆ ತನ್ನ ಪ್ರಿಯತಮನಿಗೆ ತನ್ನ ಹಿರಿಯ ಮಗಳನ್ನೇ ಕೊಟ್ಟು ಮದುವೆ ಮಾಡಿಸಿದ್ದಾಳೆ. 19 ವರ್ಷದ ಮಗಳನ್ನು ತನ್ನ ಅಕ್ರಮ ಸಂಬಂಧದ ದಾಳದ ರೀತಿಯಲ್ಲಿ ಬಳಸಿಕೊಂಡಿದ್ದಾಳೆ.

ಮದುವೆಯಾಗಿ ಗಂಡನ ಮನೆ ಸೇರಿದ ಯುವತಿಗೆ ತನ್ನ ಗಂಡ ಮತ್ತು ಅಮ್ಮ ಮದುವೆಯ ನಂತರವೂ ಅಕ್ರಮ ಸಂಬಂಧದಲ್ಲಿ ತೊಡಗಿಕೊಂಡಿರುವುದು ತಿಳಿದುಬಂದಿದೆ. ಇದರಿಂದಾಗಿ ಸಿಟ್ಟಿಗೆದ್ದ ಆಕೆ ಮೊದಲು ಅಮ್ಮನ ಜತೆಯಲ್ಲಿ ಜಗಳ ಆಡಿದ್ದಾಳೆ. ನೀವು ಹೀಗೇ ಮುಂದುವರಿದರೆ ನಾನು ಗಂಡನ ಮನೆ ಬಿಟ್ಟು ಬರುವುದಾಗಿ ಬೆದರಿಕೆ ಹಾಕಿದ್ದಾಳೆ. ಅದಕ್ಕೆ ಸಿಟ್ಟಿಗೆದ್ದ ತಾಯಿ ಹಾಗೊಂದು ವೇಳೆ ನೀನು ನಿನ್ನ ಗಂಡನನ್ನು ಬಿಟ್ಟು ಬಂದಿದ್ದೇ ಆದಲ್ಲಿ ನಾನು ಅತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸಿದ್ದಾಳೆ.

ಈ ಅಕ್ರಮ ಸಂಬಂಧದ ಬಗ್ಗೆ ತಾಯಿ ಮತ್ತು ಗಂಡ ಇಬ್ಬರ ಬಳಿಯು ಜಗಳವಾಡಿದರೂ ಪರಿಸ್ಥಿತಿ ಸುಧಾರಿಸದ ಕಾರಣ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಂಡನ ಮನೆಯ ರೂಮಿನಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಸಾಯುವುದಕ್ಕೂ ಮುನ್ನ ಡೆತ್​ ನೋಟ್​ ಬರೆದಿಟ್ಟಿದ್ದು ಅದರಲ್ಲಿ ಆರೋಪಿಗಳಿಗೆ ಶಿಕ್ಷಿಸಿ ಎಂದು ಕೇಳಿಕೊಂಡಿದ್ದಾಳೆ.

ಈ ವಿಚಾರವಾಗಿ ಮೃತ ಯುವತಿಯ 17 ವರ್ಷದ ತಂಗಿ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ. ಆತ ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎನ್ನುವ ಮಾಹಿತಿಯನ್ನು ಆಕೆ ಪೊಲೀಸರಿಗೆ ನೀಡಿದ್ದಾಳೆ. ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net