

ಹೈದರಾಬಾದ್/ಮುಂಬೈ: ಕಳೆದೆರಡು ದಿನಗಳಲ್ಲಿ ತೆಲಂಗಾಣದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ 'ಅಟ್-ರಿಸ್ಕ್' ದೇಶಗಳಿಂದ ಬಂದಿಳಿದ 13 ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಕರೊನಾ ಪಾಸಿಟೀವ್ ಬಂದಿದೆ. ಈ ಸೋಂಕಿತರ ಸ್ಯಾಂಪಲ್ಗಳನ್ನು ಗಚಿಬೌಲಿಯ ತೆಲಂಗಾಣ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ಗೆ ಜೀನೋಮ್ ಸೀಕ್ವೆಂಸಿಂಗ್ಗಾಗಿ ಕಳುಹಿಸಲಾಗಿದೆ. ಪರೀಕ್ಷೆಯ ನಂತರ ಸೋಂಕು ಒಮಿಕ್ರಾನ್ನಿಂದ ಉಂಟಾಗಿದೆಯೇ ಅಥವಾ ಡೆಲ್ಟಾ ವೇರಿಯೆಂಟ್ನಿಂದ ಉಂಟಾಗಿದೆಯೇ ಎಂಬುದು ತಿಳಿಯಲಿದೆ.
ಶುಕ್ರವಾರದಂದು ಅಟ್-ರಿಸ್ಕ್-ಕಂಟ್ರೀಸ್ ಎಂದು ಹೆಸರಿಸಲಾಗಿರುವ ಒಮಿಕ್ರಾನ್ ರೂಪಾಂತರಿ ಕಂಡುಬಂದಿರುವ ದೇಶಗಳಿಂದ 219 ಪ್ರಯಾಣಿಕರು ಹೈದರಾಬಾದ್ಗೆ ಬಂದಿದ್ದು, ಅವರಲ್ಲಿ 9 ಜನರಿಗೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿದೆ. ಡಿಸೆಂಬರ್ 1 ರಿಂದ ವಿಮಾನ ನಿಲ್ದಾಣದಲ್ಲಿ 909 ಪ್ರಯಾಣಿಕರನ್ನು ಹೆಚ್ಚಿನ ಸ್ಕ್ರೀನಿಂಗ್ಗೆ ಒಳಪಡಿಸಿದ್ದು, ಒಟ್ಟು 13 ಜನರಿಗೆ ಕರೊನಾ ಕಂಡುಬಂದಿದೆ.
ಮಹಾರಾಷ್ಟ್ರದಲ್ಲೂ 9 ಜನ ಪ್ರಯಾಣಿಕರಿಗೆ ಕರೊನಾ ಸೋಂಕು ಪತ್ತೆಯಾಗಿದ್ದು, ಅವರ ಸ್ಯಾಂಪಲ್ಗಳನ್ನು ಜೀನೋಮ್ ಸೀಕ್ವೆಂಸಿಂಗ್ಗೆ ಕಳುಹಿಸಲಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಹೈರಿಸ್ಕ್ ದೇಶಗಳ ಪ್ರಯಾಣಿಕರ ಸ್ಕ್ರೀನಿಂಗ್ ಕಟ್ಟುನಿಟ್ಟಾಗಿ ನಡೆಯುತ್ತಿದೆ ಎಂದು ರಾಜ್ಯದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ. (ಏಜೆನ್ಸೀಸ್)