ಸಮಾಧಾನಪಡಿಸಲು ಹೋದೆವು ಆದ್ರೆ ಆಕೆ... ವಿನೇಶ್​ ಪೋಗಟ್​ ಕುರಿತು ಅಚ್ಚರಿ ಹೇಳಿಕೆ ನೀಡಿದ ಕೋಚ್​​

Vinesh Phogat
Published on

ಪ್ಯಾರಿಸ್​: 33ನೇ ಆವೃತ್ತಿಯ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಭಾರತದ ಕುಸ್ತಿಪಟು ವಿನೇಶ್​ ಪೋಗಟ್​ ಅವರು ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್​ ಪಂದ್ಯಕ್ಕೂ ಮುನ್ನ ಅನರ್ಹಗೊಂಡರು. ಅನಿರೀಕ್ಷಿತ ಬಳೆವಣಿಗೆಯಲ್ಲಿ ಅವರು ಅನರ್ಹಗೊಂಡ ಪರಿಣಾಮ ಭಾರತದ ಪದಕದ ಆಸೆ ನುಚ್ಚು ನೂರಾಗಿದ್ದು, ಇದರ ಬೆನ್ನಲ್ಲೇ ಅವರು ನಿವೃತ್ತಿ ಘೋಷಿಸಿದ್ದಾರೆ.

ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ವಿನೇಶ್ ಅವರು ಫೈನಲ್​ ಪ್ರವೇಶ ಪಡೆದಿದ್ದರು. ಆದರೆ, ಫೈನಲ್​ಗೂ ಮುನ್ನ ನಡೆದ ತೂಕ ಪರೀಕ್ಷೆಯಲ್ಲಿ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿದ್ದರಿಂದ ವಿನೇಶ್​ ಅವರನ್ನು ಅನರ್ಹಗೊಳಿಸಲಾಗಿದೆ. ಒಂದು ವೇಳೆ ಅರ್ಹತೆ ಪಡೆದಿದ್ದರೆ ನಿನ್ನೆ (ಆಗಸ್ಟ್​ 07) ಅಮೆರಿಕದ ಸಾರಾ ಹಿಲ್ಡರ್‌ಬ್ರಾಂಡ್ ವಿರುದ್ಧ ಆಡಬೇಕಿತ್ತು. ಆದರೆ, ಅನರ್ಹಗೊಂಡಿದ್ದರಿಂದ ಪದಕದ ಆಸೆ ಅಂತ್ಯಗೊಂಡಿತು.

ಅನರ್ಹಗೊಂಡ ಬಳಿಕ ಆಸ್ಪತ್ರೆ ಸೇರಿದ್ದ ವಿನೇಶ್​ರನ್ನು ಕೋಚ್​ಗಳಾದ ವೀರೇಂದ್ರ ದಹಿಯಾ ಮತ್ತು ಮಂಜೀತ್​ ರಾಣಿ ಅವರನ್ನು ಭೇಟಿ ಮಾಡಿ ಸಮಾಧಾನಪಡಿಸಿದ್ದಾರೆ. ಈ ವೇಳೆ ಅವರು ಕೋಚ್​ಗಳೊಂದಿಗೆ ಮಾತನಾಡಿದ್ದು,ಅವರಿಗೆ ಧೈರ್ಯ ತುಂಬಿದ್ದಾರಂತೆ. ಈ ಸುದ್ದಿ ಕ್ರೀಡಾ ಉತ್ಸಾಹವನ್ನು ಮತ್ತಷ್ಟು ಎತ್ತಿ ಹಿಡಿದಿದೆ.

ವಿನೇಶ್​ ಭೇಟಿ ಬಳಿಕ ಮಾತನಾಡಿದ ಕೋಚ್​ ವೀರೇಂದ್ರ ದಹಿಯಾ, ಕುಸ್ತಿ ಫೆಡರೇಷನ್​ ನಮಗೆ ಆಘಾತ ನೀಡಿದ್ದು, ಕ್ರೀಡಾಪಟುಗಳು ಈ ವಿಚಾರ ತಿಳಿಯುತ್ತಿದ್ದಂತೆ ಆಕೆ ಕುಸಿದು ಬಿದ್ದಳು. ನಾವು ಆಕೆಯನ್ನು ಭೇಟಿಯಾಗಿ ಸಮಾಧಾನಪಡಿಸಲು ಮುಂದಾದೆವು. ಆಕೆ ನಮಗಿಂತ ಧೈರ್ಯಶಾಲಿಯಾಗಿದ್ದಳು. ನಾವು ಪದಕವನ್ನು ಕಳೆದುಕೊಂಡಿರುವುದು ಕಷ್ಟಕರವಾಗಿದ್ದು, ಆದರೆ ಅದು ಆಟದ ಭಾಗವಾಗಿದೆ ಎಂದು ನಮ್ಮನ್ನು ಆಕೆ ಸಮಾಧಾನಪಡಿಸಿದಳು. ಹಲವು IOA ಅಧಿಕಾರಿಗಳು ಸಹ ಅವಳನ್ನು ಭೇಟಿಯಾಗಲು ಬಂದಿದ್ದರು ಎಂದು ಕೋಚ್​ ವೀರೇಂದ್ರ ದಹಿಯಾ ತಿಳಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಅಮೆರಿಕದ ಸಾರಾ ಹಿಲ್ಡರ್‌ಬ್ರಾಂಡ್ ವಿರುದ್ಧ ಫೈನಲ್​ನಲ್ಲಿ ವಿನೇಶ್​ ಸೆಣಸಾಡಬೇಕಿತ್ತು. ಆದರೆ, ಅನರ್ಹಗೊಂಡಿರುವುದು ಭಾರತೀಯರಿಗೆ ಆಘಾತ ಉಂಟುಮಾಡಿದೆ. ಹರಿಯಾಣದ 29 ವರ್ಷದ ವಿನೇಶ್ ಪೋಗಟ್ ಮಂಗಳವಾರ (ಆ.6) ರಾತ್ರಿ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನಿಲಿಸ್ ಗುಜ್ಮನ್ ಲೋಪೆಜ್ ವಿರುದ್ಧ 5-0 ಅಂಕಗಳಿಂದ ಸುಲಭ ಗೆಲುವು ದಾಖಲಿಸಿ ಫೈನಲ್​ಗೆ ಲಗ್ಗೆ ಇಟ್ಟಿದ್ದರು. ಈ ಮುನ್ನ 2016ರ ರಿಯೋ ಒಲಿಂಪಿಕ್ಸ್​ನಲ್ಲಿ 48 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಣಕ್ಕಿಳಿದ ವಿನೇಶ್, ಕ್ವಾರ್ಟರ್​ಫೈನಲ್​ನಲ್ಲಿ ಗಾಯಕ್ಕೆ ತುತ್ತಾಗಿ ಪಂದ್ಯವನ್ನು ಅರ್ಧಕ್ಕೆ ತ್ಯಜಿಸಿದ್ದರು. 2021ರ ಟೋಕಿಯೊ ಗೇಮ್ಸ್​ನಲ್ಲಿ 53 ಕೆಜಿ ವಿಭಾಗದಲ್ಲಿ ಆಡಿದಾಗಲೂ ಎಂಟರ ಘಟ್ಟದಲ್ಲಿ ವಿನೇಶ್ ಪದಕದ ಕಸನು ಭಗ್ನಗೊಂಡಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net