ಗ್ರಾಮಸಭೆಯಿಂದ ಅಧಿಕಾರಿಗಳ ಪಲಾಯನ

sabhe
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಮಿಯ್ಯರು ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ನಡೆದ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದ್ದು, ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲು ವಿಫಲರಾದ ಅಧಿಕಾರಿಗಳು ಸಭೆಯಿಂದ ಹೊರ ನಡೆದಿದ್ದಾರೆ.

ಗ್ರಾಮಸ್ಥ ರಾಜೇಶ್ ಗ್ರಾಪಂ ವಿರುದ್ಧ ಭಾರಿ ಭ್ರಷ್ಟಾಚಾರದ ಆರೋಪ ಮಾಡಿದ್ದು, ಲೆಕ್ಕಪತ್ರದಲ್ಲಿ ಮೂರು ಫ್ಯಾನ್ ದುರಸ್ತಿಗೆ 13 ಸಾವಿರಕ್ಕೂ ಅಧಿಕ ಹಣ ವ್ಯಯಿಸಲಾಗಿದ್ದು, ಫ್ಯಾನ್‌ಗಳನ್ನು ಬೆಳ್ಳಿಯ ವೈರ್ ಅಳವಡಿಸಿ ದುರಸ್ತಿಗೊಳಿಸಲಾಗಿದೆಯೇ ಎಂಬ ಅನುಮಾನವಿದೆ ಎಂದು ವ್ಯಂಗ್ಯವಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಡಾಫೆಯಾಗಿ ಉತ್ತರಿಸಿದ್ದು, ಗ್ರಾಮಸ್ಥರ ಅಸಮಾಧಾನಕ್ಕೆ ಎಡೆಮಾಡಿತು. ಗ್ರಾಪಂ ಸದಸ್ಯ ಡೆನಿಯಲ್ ರೇಂಜರ್ ಪಿಡಿಒ ವರ್ತನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿ ಗ್ರಾಮಸಭೆ ನಡೆದಾಗಲೂ ಪ್ರಗತಿ ಪರಿಶೀಲನಾ ವರದಿಯನ್ನು ಸಂಬಂಧಿಸಿದ ಅಧಿಕಾರಿಗಳ ಅಥವಾ ಜನಪ್ರತಿನಿಧಿಗಳ ಗಮನಕ್ಕೆ ತಂದಿರುವ ಕುರಿತು ಅನುಮಾನವಿದೆ. ಒಂದು ವೇಳೆ ಗಮನಕ್ಕೆ ತಂದಿದ್ದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಪಿಡಿಒ ಮತ್ತೊಮ್ಮೆ ಅಸಮಂಜಸ ಉತ್ತರ ನೀಡಿದ್ದು, ಇದರ ವಿರುದ್ಧ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಈ ಮಧ್ಯೆ ಕೋರಂ ಇಲ್ಲದಿರುವುದರಿಂದ ಸಭೆ ಮುಂದೂಡಲು ಒತ್ತಾಯಿಸಲಾಗಿದ್ದು, ಕೊನೆಗೂ ಗ್ರಾಮಸ್ಥರ ಒತ್ತಾಯದ ಮೇರೆಗೆ ಸಭೆ ಮುಂದೂಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸನ್ಮತಿ ನಾಯಕ್, ಗಿರೀಶ್ ಅಮೀನ್, ರಾಜೇಶ್, ನೆಲ್ಸನ್ ಡಿಸೋಜ, ಸೀತಾ, ಲೇನಿ ವೈಲೆಟ್ ರೇಂಜರ್, ಇಂದಿರಾ, ಶೋಭಾ, ರೇವತಿ ನಾಯಕ್, ಶೋಭಾ ಶೆಟ್ಟಿ, ಸುಮನಾ, ನವೀನ್ ಪೂಜಾರಿ, ಪ್ರಶಾಂತ್ ಪೂಜಾರಿ ಇದ್ದರು.

ಪಿಡಿಒ ವಿರುದ್ಧ ಅಸಮಾಧಾನ

ಒಂದೇ ದಿನದಲ್ಲಿ ಏಳು ಗ್ರಾಮಸಭೆಗಳನ್ನು ನಡೆಸಲಾಗಿದೆ. ಜತೆಗೆ ಅಧ್ಯಕ್ಷರ ವಿರುದ್ಧ ಹಣಕಾಸಿನ ಅರೋಪ ಹಾಗೂ ಹಕ್ಕುಚ್ಯುತ್ತಿ ಇದ್ದು, ಅವರು ಯಾವುದೇ ಸಭೆಯಲ್ಲಿ ಅಧ್ಯಕ್ಷರಾಗಿ ಭಾಗವಹಿಸುವಂತಿಲ್ಲ. ಇಷ್ಟೆಲ್ಲಾ ಗೊತ್ತಿದ್ದರೂ ಪಿಡಿಒ ಮಾತ್ರ ಸರ್ವಾಧಿಕಾರಿಯಂತೆ ವರ್ತಿಸಿರುವುದು ಸರಿಯಲ್ಲ ಎಂದು ಗ್ರಾಪಂ ಸದಸ್ಯ ಡೇನಿಯಲ್ ರೇಂಜಆರೋಪಿದ್ದಾರೆ.

*ತೀಕ್ಷ್ಣ ಪ್ರಶ್ನೆಗೆ ಉತ್ತರಿಸಲಾಗದೆ ಅಧಿಕಾರಿಗಳಿಂದ ಸಭಾತ್ಯಾಗ

*ಗ್ರಾಪಂ ವಿರುದ್ಧ ಭಾರಿ ಭ್ರಷ್ಟಾಚಾರದ ಆರೋಪ

*ಆಡಳಿತದ ಅಸಮಂಜಸ ಉತ್ತರಕ್ಕೆ ಜನರ ವಿರೋಧ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net