ರಾಷ್ಟ್ರಪತಿ, ಪ್ರಧಾನಿ, ಸಚಿವರಿಗೆ ಹಣ್ಣು ಕೊಂಡೊಯ್ದ ಅಧಿಕಾರಿಗೆ ಕರೊನಾ!

lichi-PM
Published on

ಪಟ್ನಾ: ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಸೇರಿದಂತೆ ಅನೇಕ ಸಚಿವರು ಹಾಗೂ ಗಣ್ಯರಿಗೆ ಹಣ್ಣುಗಳನ್ನು ಉಡುಗೊರೆಯಾಗಿ ನೀಡಲು ಹೋದ ಅಧಿಕಾರಿಯೊಬ್ಬರಿಗೆ ಇದೀಗ ಕರೊನಾ ಸೋಂಕು ದೃಢಪಟ್ಟಿದೆ.

ಕೃಷಿ ಇಲಾಖೆಯ ಅಧಿಕಾರಿಯಾಗಿರುವ ಇವರು, ಈ ತಿಂಗಳ ಆರಂಭದಲ್ಲಿ ದೆಹಲಿಗೆ ಲಿಚಿ ಹಣ್ಣುಕೊಡುವ ನಿಮಿತ್ತ ತೆರಳಿದ್ದರು. ಜೂನ್​ 11ರಂದು ವಾಪಸ್​ ಬಿಹಾರಕ್ಕೆ ಆಗಮಿಸಿದ್ದರು.

ದೆಹಲಿಯಲ್ಲಿ ಇವರು ಪ್ರಧಾನಿ, ರಾಷ್ಟ್ರಪತಿ ಅಥವಾ ಇನ್ನಾವುದೇ ಕಾರ್ಯಾಲಯಗಳಿಗೆ ಹಣ್ಣುನೀಡಲು ತೆರಳಲಿಲ್ಲ, ಬದಲಿಗೆ ದೆಹಲಿಯಲ್ಲಿರುವ ಬಿಹಾರ ಭವನದಲ್ಲಿ ಹಣ್ಣನ್ನು ಒಪ್ಪಿಸಿ ಬಂದಿದ್ದಾರೆ. ಆದ್ದರಿಂದ ಯಾವುದೇ ಗಣ್ಯರಿಗೆ ಕರೊನಾ ಭೀತಿ ಇಲ್ಲ ಎಂಬ ಬಗ್ಗೆ ಮುಜಾಫರ್‌ಪುರ್ ಜಿಲ್ಲಾಡಳಿತವು ಸ್ಪಷ್ಟನೆ ನೀಡಿದೆ.

ಬಿಹಾರಕ್ಕೆ ಜೂನ್ 11ರಂದು ಮರಳಿದ ಬಳಿಕ ಅಧಿಕಾರಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂನ್‌ 20ರಂದು ಸೋಂಕು ಇರುವುದು ದೃಢಪಟ್ಟಿದ್ದು, ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

'ಹೆಸರಾಂತ ಶಾಹಿ ಲಿಚಿ ಹಣ್ಣುಗಳ ಬುಟ್ಟಿಗಳನ್ನು ಸುರಕ್ಷಿತವಾಗಿ, ಸಕಾಲದಲ್ಲಿ ಬಿಹಾರ ಭವನಕ್ಕೆ ತಲುಪಿಸುವ ಹೊಣೆ ಒಪ್ಪಿಸಲಾಗಿತ್ತು ಇವರಿಗೆ ಒಪ್ಪಿಸಲಾಗಿತ್ತು. ದೆಹಲಿಯಲ್ಲಿ ಪ್ರಮುಖರಿಗೆ ಈ ಹಣ್ಣುಗಳ ಬುಟ್ಟಿಗಳನ್ನು ತಲುಪಿಸುವಲ್ಲಿ ಅಧಿಕಾರಿಯ ಪಾತ್ರವಿರಲಿಲ್ಲ. ಆ ಹೊಣೆಯನ್ನು ದೆಹಲಿಯಲ್ಲಿ ಬಿಹಾರ ಭವನದ ಅಧಿಕಾರಿಗಳು ನಿರ್ವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ಪ್ರಸಾದ್‌ ಸಿಂಗ್‌ ವಿವರಣೆ ನೀಡಿದ್ದಾರೆ.

ಈ ಬಗ್ಗೆ ಸಾರ್ವಜನಿಕ ಸಂಪರ್ಕ ಇಲಾಖೆಯೂ ಸ್ಪಷ್ಟನೆ ನೀಡಿದ್ದು, ನೇರವಾಗಿ ಯಾರದ್ದೇ ಕಾರ್ಯಾಲಯಕ್ಕೆ ಇವರು ಪ್ರವೇಶಿಸಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net