10 ಬಾಟಲ್​ ಬಿಯರ್​ ಗಟಗಟ ಏರಿಸಿ ನಿದ್ದೆಗೆ ಜಾರಿದ ಭೂಪ... ಮುಂದೆ?

chienes beer
Published on

ಬೀಜಿಂಗ್​: ಎರಡು ಅಥವಾ ಮೂರು ಪಿಂಟ್ ಬಿಯರ್ ಕುಡಿದ ನಂತರ ಶೌಚಾಲಯಕ್ಕೆ ಹೋಗುವುದು ಸಾಮಾನ್ಯ. ಏಕೆಂದರೆ ಬಿಯರ್​ ಕುಡಿದ ನಂತರ ಮೂತ್ರಕಟ್ಟಿಕೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ ಇದರ ಸೇವನೆ ಹೆಚ್ಚಿದಂತೆ ಮೂತ್ರದ ಪ್ರಮಾಣವೂ ಅಷ್ಟೇ ಹೆಚ್ಚುತ್ತಾ ಹೋಗುತ್ತದೆ.

ಬಿಯರ್​ ಕುಡಿದ ನಂತರ ಮೂತ್ರ ಮಾಡಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಮದ್ಯಸೇವನೆ ಮಾಡಿದಾಗ ಮಾತ್ರವಲ್ಲ, ಯಾವಾಗಲೂ ಮೂತ್ರವನ್ನು ಕಟ್ಟಿಟ್ಟುಕೊಳ್ಳಬೇಡಿ ಎಂದು ವೈದ್ಯರು ಸಲಹೆ ನೀಡುವುದು ಮಾಮೂಲು.

ಆದರೆ ಚೀನಾದ ಒಬ್ಬ ಭೂಪ, ಒಂದಲ್ಲ, ಎರಡಲ್ಲ, ಬರೋಬ್ಬರಿ 18 ಬಾಟಲಿ ಬಿಯರ್​ ಕುಡಿದಿದ್ದಾನೆ. ಈತನ ಹೆಸರು ಹೂ. ಬರೀ ಕುಡಿದಿದ್ದರೆ ಪರವಾಗಿಲ್ಲ. ಒಮ್ಮೆಯೂ ಮೂತ್ರಕ್ಕೆ ಹೋಗದ ಆತ 18 ಬಾಟಲಿ ಏರಿಸಿದ್ದಾನೆ. ಎಲ್ಲಾ ಬಾಟಲಿಗಳು ಹೊಟ್ಟೆಗೆ ಇಳಿಯುತ್ತಿದ್ದಂತೆಯೇ ಲೋಕದ ಅರಿವೇ ಇಲ್ಲದೆ ನಿದ್ದೆಗೆ ಜಾರಿಬಿಟ್ಟಿದ್ದಾನೆ. ಅದೂ ಎಷ್ಟು ಗಂಟೆ ಅಂತೀರಾ? 18 ತಾಸು ನಿದ್ದೆ ಮಾಡಿದ್ದಾನೆ.

ನಂತರ ಎಚ್ಚರವಾದಾಗ ಮೂತ್ರಕೋಶದಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ. ಹೊಟ್ಟೆ ಊದಿಕೊಂಡದ್ದು ಮಾತ್ರವಲ್ಲದೇ ಸರಿಯಾಗಿ ಕುಳಿತುಕೊಳ್ಳಲು ಕೂಡ ಆತನಿಗೆ ಸಾಧ್ಯವಾಗಲಿಲ್ಲ. ಕೂಡಲೇ ಆಸ್ಪತ್ರೆಗೆ ಹೋಗಿದ್ದಾನೆ ಈತ.

ವೈದ್ಯರು ಮಲಗಿಕೊಳ್ಳಲು ಹೇಳಿದಾಗ ಮಲಗಲು ಕೂಡ ಆತನಿಗೆ ಸಾಧ್ಯವಾಗಲಿಲ್ಲ. ನಂತರ ಆತನ ಬಗ್ಗೆ ವಿಚಾರಿಸಿದಾಗ ತಾವು 10 ಬಾಟಲ್​ ಬಿಯರ್​ ಕುಡಿದಿರುವುದಾಗಿ ಹೇಳಿದ್ದಾನೆ. ಅವನನ್ನು ನೋಡುತ್ತಲೇ ವೈದ್ಯರು ಮೂತ್ರಕೋಶದಲ್ಲಿ ತೊಂದರೆ ಆಗಿರುವುದು ಅರಿವಿಗೆ ಬಂತು. ಕೂಡಲೇ ಅವನನ್ನು ಮೂತ್ರಶಾಸ್ತ್ರ ವಿಭಾಗದಲ್ಲಿ ಸ್ಕ್ಯಾನಿಂಗ್​ ವಿಭಾಗಕ್ಕೆ ಸಾಗಿಸಿದಾಗ ಅದನ್ನು ಪರೀಕ್ಷೆ ಮಾಡಿದ ವೈದ್ಯರೇ ಕಂಗಾಲಾಗಿ ಹೋದರು. ಏಕೆಂದರೆ ಮೂತ್ರಕೋಶದಲ್ಲಿ ಮೂರು ಕಡೆ ರಂಧ್ರ ಆಗಿರುವುದು ಕಾಣಿಸಿತು!

10 ಬಾಟಲ್​ ಬಿಯರ್​ ಕುಡಿದರೂ ಮೂತ್ರಕ್ಕೆ ಹೋಗದ ಕಾರಣ, ಮೂತ್ರಕೋಶವು ಉಬ್ಬಿ ರಂಧ್ರ ಉಂಟಾಗಿತ್ತು. ನಂತರ ಕೂಡಲೇ ಆತನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಸದ್ಯ ಅವನ ಆರೋಗ್ಯಸ್ಥಿತಿ ಸರಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅತಿಯಾದ ದ್ರವಪದಾರ್ಥ ಸೇವಿಸಿದಾಗ ಮೂತ್ರಕೋಶದ ಗಾತ್ರವು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಒಬ್ಬ ಮನುಷ್ಯ 350-400 ಮಿಲಿಮೀಟರ್​ನಷ್ಟು ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಮೂತ್ರಕೋಶಕ್ಕಿದೆ. ಅದಕ್ಕಿಂತ ಹೆಚ್ಚಾದಾಗ ಮೂತ್ರವಿಸರ್ಜನೆ ಆಗದಿದ್ದರೆ ಇಂಥ ಸಮಸ್ಯೆ ಉಂಟಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net