

ನವದೆಹಲಿ: ಒಡಿಶಾ ರೈಲು ದುರಂತದ ಸೂಕ್ತ ತನಿಖೆಗೆ ಆಗ್ರಹಿಸಿ ಸುಪ್ರೀಂಕೋರ್ಟ್ಗೆ ಇಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಾಗಿದೆ. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ, ತನಿಖೆ ನಡೆಸುವಂತೆ ಅರ್ಜಿದಾರ ಸುಪ್ರೀಂಕೋರ್ಟ್ ಬಳಿ ಮನವಿ ಮಾಡಿದ್ದಾರೆ.
ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ಮೂರು ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 288 ಮಂದಿ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಂಡಿದ್ದಾರೆ. 1000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅನೇಕ ಜನರ ಬದುಕು ಸಹ ಹಳಿತಪ್ಪಿದೆ. ಇದನ್ನೂ ಓದಿ: ಮಹಿಳೆಯರೇ ಗಮನಿಸಿ: ಉಚಿತ ಪ್ರಯಾಣಕ್ಕೂ ಟಿಕೆಟ್ ಪಡೆಯಲೇಬೇಕು! ಹೀಗಿರಲಿದೆ ಟಿಕೆಟ್ ಮಾದರಿ
ತನಿಖೆ ಮಾತ್ರವಲ್ಲದೆ, ಭಾರತೀಯ ರೈಲ್ವೆಯಾದ್ಯಂತ ಕವಚ್ ರಕ್ಷಣಾ ವ್ಯವಸ್ಥೆ ಎಂದೇ ಕರೆಯಲಾಗುವ ಸ್ವಯಂಚಾಲಿತ ರೈಲು ರಕ್ಷಣಾ (ATP) ವ್ಯವಸ್ಥೆಯನ್ನು ತಕ್ಷಣ ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆಯೂ ಪಿಐಎಲ್ನಲ್ಲಿ ಕೋರಲಾಗಿದೆ. ಅಂದಹಾಗೆ ಈ ಕವಚ್ ರಕ್ಷಣಾ ವ್ಯವಸ್ಥೆಯು ಲೊಕೊಮೊಟಿವ್ ಪೈಲಟ್ ವಿಫಲವಾದಾಗ ರೈಲಿನ ವೇಗವನ್ನು ಸ್ವಯಂಚಾಲಿತವಾಗಿ ನಿಯಂತ್ರಿಸುವ ಮತ್ತು ಬ್ರೇಕ್ಗಳನ್ನು ಅನ್ವಯಿಸುವ ಮೂಲಕ ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಪಿಐಎಲ್ ಸಲ್ಲಿಸಿದವರು ವಕೀಲ ವಿಶಾಲ್ ತಿವಾರಿ ಎಂಬುವರು. ಸುಪ್ರಿಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಮತ್ತು ತಾಂತ್ರಿಕ ಸದಸ್ಯರನ್ನು ಒಳಗೊಂಡ ತಜ್ಞರ ಸಮಿತಿಯನ್ನು ತಕ್ಷಣ ರಚನೆ ಮಾಡಿ ತನಿಖೆ ನಡೆಸುವಂತೆ ಪಿಐಎಲ್ನಲ್ಲಿ ಕೋರಿದ್ದಾರೆ. ರೈಲ್ವೆ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಅಪಾಯ ಮತ್ತು ಸುರಕ್ಷತಾ ಮಾನದಂಡಗಳನ್ನು ವಿಶ್ಲೇಷಿಸುವುದು ಮತ್ತು ನಿರ್ಣಯಿಸುವುದು ಈ ಸಮಿತಿಯ ಉದ್ದೇಶವಾಗಿರಲಿ ಎಂದು ವಿಶಾಲ್ ತಿವಾರಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಪ್ರತಿದಿನ 4 ಲಕ್ಷ ರೂ. ಸಂಪಾದನೆ: ವಿಕಿಪೀಡಿಯಾವೂ ತಪ್ಪು ಹೇಳ್ತಿದೆ ಎಂದು ಕಷ್ಟದ ದಿನಗಳನ್ನು ನೆನೆದ ಶಕೀಲಾ
ಪಶ್ಚಿಮ ಬಂಗಾಳದ ಹೌರಾ ನಗರದಿಂದ ತಮಿಳುನಾಡಿನ ಚೆನ್ನೈಗೆ ತೆರಳುತ್ತಿದ್ದ ಕೊರಮಂಡಲ್ ಎಕ್ಸ್ಪ್ರೆಸ್ ರೈಲಿನ ಕೆಲವು ಬೋಗಿಗಳು ಹಳಿತಪ್ಪಿ ಪಕ್ಕದ ಹಳಿಗಳ ಮೇಲೆ ಬಿದ್ದವು. ಈ ವೇಳೆ ಮತ್ತೊಂದು ಕಡೆಯಿಂದ ಬರುತ್ತಿದ್ದ ಯಶವಂತಪುರ-ಹೌರಾ ಸೂಪರ್ಫಾಸ್ಟ್ ಟ್ರೈನ್, ಹಳಿಗಳ ಮೇಲೆ ಬಿದ್ದಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ಟ್ರೈನ್ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ರೈಲು ಅಪಘಾತ ಸಂಭವಿಸಿದೆ. (ಏಜೆನ್ಸೀಸ್)