ಒಡಿಶಾ ರೈಲು ದುರಂತಕ್ಕೆ ಕಾರಣ ಪತ್ತೆ, ಶೀಘ್ರದಲ್ಲೇ ವರದಿ ಬಿಡುಗಡೆ: ಅಶ್ವಿನಿ ವೈಷ್ಣವ್​ ಹೇಳಿಕೆ

Ashwini Vaishnav
Published on

ಬಾಲಾಸೋರ್​: ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಎಕ್ಸ್‌ಪ್ರೆಸ್ ರೈಲುಗಳ ಭೀಕರ ಅಪಘಾತಕ್ಕೆ ಕಾರಣ ಏನು ಎಂಬುದನ್ನು ಪತ್ತೆಹಚ್ಚಿದ್ದೇವೆ. ಶೀಘ್ರದಲ್ಲೇ ತನಿಖಾ ವರದಿಯನ್ನು ಬಹಿರಂಗಪಡಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ತಿಳಿಸಿದ್ದಾರೆ.

ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ರೈಲು ದುರಂತಗಳಲ್ಲಿ ಒಡಿಶಾ ರೈಲು ದುರಂತವೂ ಕೂಡ ಒಂದಾಗಿದೆ. ಈ ಅಪಘಾತದಲ್ಲಿ 288 ಮಂದಿ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಂಡಿದ್ದಾರೆ. 1000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅನೇಕ ಜನರ ಬದುಕು ಸಹ ಹಳಿತಪ್ಪಿದೆ.

ಈ ಘಟನೆಯ ಬಗ್ಗೆ ಮಾತನಾಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​, ತನಿಖೆ ಪೂರ್ಣಗೊಂಡಿದೆ. ಈ ಅಪಘಾತದ ಮೂಲ ಕಾರಣವನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ತನಿಖಾ ವರದಿ ಬಹಿರಂಗಪಡಿಸುತ್ತೇವೆ. ಪ್ರಧಾನಿ ಮೋದಿ ನಿನ್ನೆ ಸ್ಥಳವನ್ನು ಪರಿಶೀಲಿಸಿದ್ದಾರೆ. ನಾವಿಂದು ಹಳಿಗಳನ್ನು ಮರುಸ್ಥಾಪಿಸುತ್ತಿದ್ದೇವೆ. ಈಗಾಗಲೇ ಎಲ್ಲ ದೇಹಗಳನ್ನು ಹೊರತೆಗೆಯಲಾಗಿದೆ. ಬುಧವಾರ ಬೆಳಗ್ಗೆ ಮರುಸ್ಥಾಪನೆ ಕಾರ್ಯವನ್ನು ಪೂರ್ಣಗೊಳಿಸುವುದು ನಮ್ಮ ಗುರಿಯಾಗಿದೆ ಎಂದರು.

ಸದ್ಯ ರೈಲ್ವೆ ಸಚಿವಾಲಯವು ಮರುಸ್ಥಾಪನೆ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. 1,000 ಕ್ಕೂ ಹೆಚ್ಚು ಜನರು, ಏಳು ಪೊಕ್ಲೈನ್ ಯಂತ್ರಗಳು, ಎರಡು ಅಪಘಾತ ಪರಿಹಾರ ರೈಲುಗಳು ಮತ್ತು ಮೂರರಿಂದ ನಾಲ್ಕು ರೈಲ್ವೆ ಮತ್ತು ರಸ್ತೆ ಕ್ರೇನ್‌ಗಳನ್ನು ಆರಂಭಿಕ ಮರುಸ್ಥಾಪನೆಗಾಗಿ ನಿಯೋಜಿಸಲಾಗಿದೆ ಎಂದು ರೈಲ್ವೆ ಸಚಿವಾಲಯವು ಟ್ವೀಟ್‌ನಲ್ಲಿ ತಿಳಿಸಿದೆ.

ಅಪಘಾತ ಸಂಭವಿಸಿದ್ದು ಹೇಗೆ?

ಪಶ್ಚಿಮ ಬಂಗಾಳದ ಹೌರಾ ನಗರದಿಂದ ತಮಿಳುನಾಡಿನ ಚೆನ್ನೈಗೆ ತೆರಳುತ್ತಿದ್ದ ಕೊರಮಂಡಲ್​​ ಎಕ್ಸ್​ಪ್ರೆಸ್​ ರೈಲಿನ ಕೆಲವು ಬೋಗಿಗಳು ಹಳಿತಪ್ಪಿ ಪಕ್ಕದ ಹಳಿಗಳ ಮೇಲೆ ಬಿದ್ದವು. ಈ ವೇಳೆ ಮತ್ತೊಂದು ಕಡೆಯಿಂದ ಬರುತ್ತಿದ್ದ ಯಶವಂತಪುರ-ಹೌರಾ ಸೂಪರ್​ಫಾಸ್ಟ್​ ಟ್ರೈನ್,​ ಹಳಿಗಳ ಮೇಲೆ ಬಿದ್ದಿದ್ದ ಕೋರಮಂಡಲ್​ ಎಕ್ಸ್​ಪ್ರೆಸ್​ ಟ್ರೈನ್​ ಬೋಗಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ರೈಲು ಅಪಘಾತ ಸಂಭವಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net