

ಭುವನೇಶ್ವರ: ನವಜಾತ ಹೆಣ್ಣು ಮಗುವಿಗೆ ತಂದೆಯೇ ವಿಷದ ಇಂಜೆಕ್ಷನ್ ಚುಚ್ಚಿರುವ ಹೃದಯವಿದ್ರಾವಕ ಘಟನೆ ಒಡಿಸ್ಸಾದ ಭುವನೇಶ್ವರ ಹತ್ತಿರದ ಬಾಲಸೋರ್ ಎಂಬಲ್ಲಿ ನಡೆದಿದೆ.
ಚಂದನ್ ಮಹಾನಾ ಎಂಬಾತ ಈ ಕೃತ್ಯ ಎಸಗಿದ ಆರೋಪಿಯಾಗಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ. ಇನ್ನು, 20 ದಿನಗಳ ಹೆಣ್ಣು ಮಗುವಿನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಒಂದು ವರ್ಷದ ಹಿಂದೆ ಸಿಂಘಿರಿ ಗ್ರಾಮದ ತನ್ಮಯಿ-ಚಂದನ್ ವಿವಾಹವಾಗಿತ್ತು. 20 ದಿನಗಳ ಹಿಂದೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ತನ್ಮಯಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಹೆರಿಗೆಯ ನಂತರ ಆಕೆ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದಳು.
ಚಂದನ್ ತನ್ನ ಮಗಳನ್ನು ನೋಡಲು ಬಂದಿದ್ದ ವೇಳೆ, ನವಜಾತ ಮಗುವನ್ನು ತನ್ನ ಪತಿಯೊಂದಿಗೆ ಬಿಟ್ಟು ತನ್ಮಯಿ ಬೆಳಗ್ಗೆ 10 ಗಂಟೆ ಸುಮಾರಿಗೆ ಸ್ನಾನಕ್ಕೆ ತೆರಳಿದ್ದಳು. ಆದರೆ, ಮಗು ಏಕಾಏಕಿ ಜೋರಾಗಿ ಅಳಲು ಆರಂಭಿಸಿತು. ಕೂಡಲೇ ಆಕೆ ಹಾಸಿಗೆಯ ಕೆಳಗೆ ಸಿರಿಂಜ್ನ್ನು ನೋಡಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.(ಏಜೆನ್ಸೀಸ್)