

ಬೆಂಗಳೂರು: ಆತಿಥೇಯ ಇಂಗ್ಲೆಂಡ್ ಮತ್ತು ಪ್ರವಾಸಿ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಸೌಥಾಂಪ್ಟನ್ ಟೆಸ್ಟ್ ಪಂದ್ಯದೊಂದಿಗೆ ಕ್ರಿಕೆಟ್ನ ಸಾಂಪ್ರದಾಯಿಕ ಮಾದರಿಗೆ ಚಾಲನೆ ದೊರೆತಿದೆ. 117 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರಾರಂಭಗೊಂಡಿರುವುದಕ್ಕೆ ಕ್ರಿಕೆಟ್ ಪ್ರೇಮಿಗಳೆಲ್ಲರೂ ಖುಷಿಪಡುತ್ತಿದ್ದಾರೆ. ಈ ನಡುವೆ ಕ್ರಿಕೆಟ್ನ ರೋಚಕತೆ, ಮನರಂಜನೆಗಳಿಗೆ ವೇದಿಕೆಯಾಗುವ ಏಕದಿನ ಮತ್ತು ಟಿ20 ಪಂದ್ಯಗಳು ಯಾವಾಗ ಆರಂಭವಾಗಲಿದೆ ಎಂಬ ಪ್ರಶ್ನೆಯೂ ಎದ್ದಿದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಟೆಸ್ಟ್ ಕ್ರಿಕೆಟ್ ಪುನರಾರಂಭಕ್ಕೆ ವೇದಿಕೆಯಾಗಿರುವ ಕ್ರಿಕೆಟ್ ಜನಕರ ನಾಡಿನಲ್ಲೇ ಅಂತಾರಾಷ್ಟ್ರೀಯ ಏಕದಿನ ಮತ್ತು ಟಿ20 ಪಂದ್ಯಗಳು ಕೂಡ ಮೊದಲಿಗೆ ಶುರುವಾಗಲಿವೆ. ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ ಬಳಿಕ ಏಕದಿನ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡ ನೆರೆಯ ದೇಶ ಐರ್ಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಮೂಲಕ ಕರೊನಾ ಹಾವಳಿಯ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಜುಲೈ 30ರಂದು ಸೌಥಾಂಪ್ಟನ್ನ ಏಜಿಯಸ್ ಬೌಲ್ನಲ್ಲೇ ಮೊದಲ ಏಕದಿನ ಪಂದ್ಯ ನಿಗದಿಯಾಗಿದೆ. ಆಗಸ್ಟ್ 1 ಮತ್ತು 4 ರಂದು ಮತ್ತೆರಡು ಏಕದಿನ ಪಂದ್ಯಗಳು ನಡೆಯಲಿವೆ. ಮಾರ್ಚ್ 13ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಕೊನೆಯ ಏಕದಿನ ಪಂದ್ಯ ನಡೆದಿತ್ತು. ಸಿಡ್ನಿಯಲ್ಲಿ ಖಾಲಿ ಕ್ರೀಡಾಂಗಣದಲ್ಲೇ ಈ ಏಕದಿನ ಪಂದ್ಯ ನಡೆದಿತ್ತು.
ಇನ್ನು ಟಿ20 ಪಂದ್ಯದ ಪುನರಾರಂಭಕ್ಕೆ ಕ್ರಿಕೆಟ್ ಪ್ರೇಮಿಗಳು ಆಗಸ್ಟ್ ಅಂತ್ಯದವರೆಗೂ ಕಾಯಬೇಕಾಗಿದೆ. ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯ ಬಳಿಕ ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧ ಮತ್ತೆ 3 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಬಳಿಕ ಆಗಸ್ಟ್ 28ರಿಂದ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಓಲ್ಡ್ ಟ್ರಾಫೋರ್ಡ್ನಲ್ಲಿ ಈ ಪಂದ್ಯಗಳು ನಡೆಯಲಿವೆ. ಕೊನೆಯದಾಗಿ ಅಂತಾರಾಷ್ಟ್ರೀಯ ಟಿ20 ಪಂದ್ಯ ಮಾರ್ಚ್ 11ರಂದು ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ತಂಡಗಳ ನಡುವೆ ಢಾಕಾದಲ್ಲಿ ನಡೆದಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ:
ಇಂಗ್ಲೆಂಡ್-ಐರ್ಲೆಂಡ್ ಏಕದಿನ ಸರಣಿ:
*ಮೊದಲ ಏಕದಿನ: ಜುಲೈ 30: ಸೌಥಾಂಪ್ಟನ್ (ಆರಂಭ: ಸಂಜೆ 6.30)
*2ನೇ ಏಕದಿನ: ಆಗಸ್ಟ್ 1: ಸೌಥಾಂಪ್ಟನ್ (ಆರಂಭ: ಸಂಜೆ 6.30)
*3ನೇ ಏಕದಿನ: ಆಗಸ್ಟ್ 4: ಸೌಥಾಂಪ್ಟನ್(ಆರಂಭ: ಸಂಜೆ 6.30)
ಇಂಗ್ಲೆಂಡ್-ಪಾಕಿಸ್ತಾನ ಸರಣಿ:
*ಮೊದಲ ಟೆಸ್ಟ್: ಆಗಸ್ಟ್ 5-9: ಮ್ಯಾಂಚೆಸ್ಟರ್ (ಆರಂಭ: ಮಧ್ಯಾಹ್ನ 3.30)
*2ನೇ ಟೆಸ್ಟ್: ಆಗಸ್ಟ್ 13-17: ಸೌಥಾಂಪ್ಟನ್ (ಆರಂಭ: ಮಧ್ಯಾಹ್ನ 3.30)
*3ನೇ ಟೆಸ್ಟ್: ಆಗಸ್ಟ್ 21-25: ಸೌಥಾಂಪ್ಟನ್ (ಆರಂಭ: ಮಧ್ಯಾಹ್ನ 3.30)
*ಮೊದಲ ಟಿ20: ಆಗಸ್ಟ್ 28: ಮ್ಯಾಂಚೆಸ್ಟರ್ (ಆರಂಭ: ರಾತ್ರಿ 10.30)
*2ನೇ ಟಿ20: ಆಗಸ್ಟ್ 30: ಮ್ಯಾಂಚೆಸ್ಟರ್ (ಆರಂಭ: ರಾತ್ರಿ 7.00)
*3ನೇ ಟಿ20: ಸೆಪ್ಟೆಂಬರ್ 1: ಮ್ಯಾಂಚೆಸ್ಟರ್ (ಆರಂಭ: ರಾತ್ರಿ 10.30)
ನೇರಪ್ರಸಾರ: ಸೋನಿ ಸಿಕ್ಸ್, ಜಿಯೋ ಟಿವಿ
*ಸಮಯ: ಭಾರತೀಯ ಕಾಲಮಾನ.