

ಚೆನ್ನೈ: ಮನೋಜ್ ಬಾಜ್ಪೇಯಿ, ಸಮಂತಾ, ಪ್ರಿಯಾಮಣಿ ಮುಂತಾದವರು ಅಭಿನಯಿಸಿರುವ ದಿ ಫ್ಯಾಮಿಲಿ ಮ್ಯಾನ್ 2 ವೆಬ್ಸೀರೀಸ್, ಜೂನ್ ನಾಲ್ಕರಂದು ಅಮೇಜಾನ್ ಪ್ರೈಮ್ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈಗಾಗಲೇ ಈ ವೆಬ್ಸರಣಿಯ ಟ್ರೇಲರ್ ಹಿಟ್ ಆಗಿದ್ದು, ಒಂದೇ ದಿನದಲ್ಲಿ 15 ಮಿಲಿಯನ್ ವೀಕ್ಷಣೆ ಪಡೆದ ಮೊದಲ ಭಾರತೀಯ ವೆಬ್ಸೀರೀಸ್ ಟ್ರೇಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಮಧ್ಯೆ, ದಿ ಫ್ಯಾಮಿಲಿ ಮ್ಯಾನ್ 2 ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಈ ಕಾರ್ಯಕ್ರಮವನ್ನು ಬಿಡುಗಡೆ ಮಾಡಬಾರದು ಎಂದು ನಾಮ್ ತಮಿಳರ್ ಕಚ್ಚಿ (ಎನ್ಟಿಕೆ) ಸಂಘಟನೆಯ ಸಂಸ್ಥಾಪಕ ಸೀಮನ್ ಒತ್ತಾಯ ಮಾಡಿದ್ದಾರೆ.
ಈ ಫ್ಯಾಮಿಲಿ ಮ್ಯಾನ್ 2 ವೆಬ್ಸರಣಿಯು ತಮಿಳಿಗರನ್ನು ಕೆಟ್ಟದಾಗಿ ತೋರಿಸುವುದರ ಜತೆಗೆ, ಎಲ್ಟಿಟಿಇಯನ್ನು ಉಗ್ರಗಾಮಿ ಸಂಘಟನೆ ಎಂದು ಬಿಂಬಿಸಲು ಮುಂದಾಗಿದೆ. ಇಲ್ಲಿ ಸಮಂತಾ ಅವರನ್ನು ಒಂದು ಸಂಘಟನೆಯ ಸದಸ್ಯಳನ್ನಾಗಿ ತೋರಿಸಲಾಗಿದ್ದು, ಆಕೆಯ ಉಡುಪಿನ ಬಣ್ಣವು ಎಲ್‌ಟಿಟಿಇ ಸಮವಸ್ತ್ರವನ್ನು ಹೋಲುತ್ತದೆ. ಅಲ್ಲಿ ನಡೆಯುವ ಸಂಭಾಷಣೆಯು ಪಾಕಿಸ್ತಾನದ ಐಎಸ್‌ಐ ನಡುವಿನ ಸಂಪರ್ಕವನ್ನು ಉಲ್ಲೇಖಿಸುತ್ತವೆ. ಈ ಮೂಲಕ ಎಲ್ಟಿಟಿಇಯನ್ನು ಉದ್ದೇಶಪೂರ್ವಕವಾಗಿ ಉಗ್ರಗಗಾಮಿ ಸಂಘಟನೆ ಎಂದು ತೋರಿಸಲಾಗುತ್ತಿದೆ. ಹಾಗಾಗಿ, ಈ ಕಾರ್ಯಕ್ರಮವನ್ನು ಬಿಡುಗಡೆ ಮಾಡುವುದಕ್ಕೆ ಅನುಮತಿ ಕೊಡಬಾರದು ಎಂದು ಅವರು ಹೇಳಿದ್ದಾರೆ.
ಒಂದು ಪಕ್ಷ ಬಿಡುಗಡೆ ಮಾಡಿದರೆ, ಆಗ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.