

ಮುಂಬೈ: ಲಾಕ್ಡೌನ್ನಿಂದ ಚಿತ್ರಮಂದಿರಗಳು ಬಂದ್ ಆಗಿವೆ. ಚಿತ್ರಮಂದಿರಗಳಲ್ಲಿ ಮತ್ತೆ ಚಿತ್ರಪ್ರದರ್ಶನ ಪ್ರಾರಂಭವಾಗುತ್ತದೆ ಎಂದು ಯಾರಿಗೂ ಸದ್ಯಕ್ಕೆ ಹೇಳುವುದು ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹಲವು ಚಿತ್ರತಂಡಗಳು ತಮ್ಮ ಚಿತ್ರಗಳನ್ನು ಒಟಿಟಿಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿವೆ.
ಕಳೆದ ವರ್ಷ ಲಾಕ್ಡೌನ್ ಇದೇ ಸಮಯದಲ್ಲಿ ಲಾಕ್ಡೌನ್ ಇದ್ದಾಗ, ಬಿಡುಗಡೆಗೆ ತಯಾರಾಗಿದ್ದ ಹಲವು ಚಿತ್ರಗಳ ಹಕ್ಕುಗಳನ್ನು ಪಡೆದ ಅಮೇಜಾನ್ ಪ್ರೈಮ್, ಡಿಸ್ನಿ ಹಾಟ್ಸ್ಟಾರ್ ಮುಂತಾದ ಒಟಿಟಿಗಳು, ಆ ಚಿತ್ರಗಳನ್ನು ನೇರವಾಗಿ ಬಿಡುಗಡೆ ಮಾಡಿದವು. ಅದರಲ್ಲೂ ಡಿಸ್ನಿ ಹಾಟ್ಸ್ಟಾರ್ ಸಂಸ್ಥೆಯು ಕೆಲವು ಬಿಗ್ ಬಜೆಟ್ ಚಿತ್ರಗಳನ್ನು, ದೊಡ್ಡ ಮೊತ್ತಕ್ಕೆ ಖರೀದಿಸಿ ಬಿಡುಗಡೆ ಮಾಡಿದವು. ಅದರಿಂದ ಸಂಸ್ಥೆಗೆ ಸಾಕಷ್ಟು ನಷ್ಟವೂ ಆಯಿತು ಎಂದು ಹೇಳಲಾಗುತ್ತಿದೆ.
ಹಾಗಾಗಿ, ಈ ಬಾರಿ ದೊಡ್ಡ ಚಿತ್ರಗಳನ್ನು ಬಿಟ್ಟು, ಕಡಿಮೆ ಬಜೆಟ್ ಮತ್ತು ಜನಪ್ರಿಯ ನಟ-ನಟಿಯರು ನಟಿಸಿರುವ ಒಂದಿಷ್ಟು ಚಿತ್ರಗಳನ್ನು ಡಿಸ್ನಿ ಹಾಟ್ಸ್ಟಾರ್ ಖರೀದಿಸಿದೆಯಂತೆ. ಸದ್ಯಕ್ಕೆ ಐದು ಚಿತ್ರಗಳ ಹಕ್ಕುಗಳನ್ನು ಡಿಸ್ನಿ ಹಾಟ್ಸ್ಟಾರ್ ಪಡೆದಿದ್ದು, ಮುಂದಿನ ದಿನಗಳಲ್ಲಿ ಒಂದರಹಿಂದೊಂದು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಸೈಫ್ ಅಲಿ ಖಾನ್, ಅರ್ಜುನ್ ಕಪೂರ್ ಮತ್ತು ಜಾಕ್ಲೀನ್ ಫನಾಂರ್ಡಿಸ್ ಅಭಿನಯದ ಭೂತ್ ಪೊಲೀಸ್, ಈ ಪಟ್ಟಿಯಲ್ಲಿರುವ ಮೊದಲ ಚಿತ್ರ. ಪ್ರಿಯದರ್ಶನ್ ನಿರ್ದೇಶನದ ಮತ್ತು ಶಿಲ್ಪಾ ಶೆಟ್ಟಿ, ಪ್ರಣೀತಾ ಸುಭಾಷ್ ಮುಂತಾದವರು ಅಭಿನಯಿಸಿರುವ ಹಂಗಾಮಾ 2 ಚಿತ್ರಗಳು ಒಟಿಟಿ ಮಾರ್ಗ ಹಿಡಿದಿವೆ. ಇದಲ್ಲದೆ, ಕೃತಿ ಸನೋನ್ ಅಭಿನಯದ ಮಿಮಿ, ಶಿದ್ಧತ್ ಮತ್ತು ಶಾಧಿಸ್ತಾನ್ ಚಿತ್ರಗಳು ಸಹ ಮುಂದಿನ ದಿನಗಳಲ್ಲಿ ಡಿಸ್ನಿ-ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ.