ಕಿಚ್ಚನ ಕಾಳಜಿ: ಪೋಷಕ ಕಲಾವಿದರಿಗೆ ಸ್ಪಂದಿಸಿದ ಸುದೀಪ್

Sudeep
Published on

ಬೆಂಗಳೂರು: ನಟನೆಯ ಜತೆಗೆ ಸಾಮಾಜಿಕ ಕೆಲಸಗಳಲ್ಲಿಯೂ ಸುದೀಪ್ ಮುಂದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಶಾಲೆ ದತ್ತು, ಹಣಕಾಸಿನ ನೆರವು, ಶಿಕ್ಷಣ.. ಹೀಗೆ ಹತ್ತು ಹಲವು ಕೆಲಸಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಇದೀಗ ಕೋವಿಡ್ ಕಷ್ಟಕಾಲದಲ್ಲಿ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಹಿರಿಯ ಜೀವಗಳಿಗೂ ಸುದೀಪ್ ಸ್ಪಂದಿಸಿದ್ದಾರೆ. ಈಗಾಗಲೇ ಹಸಿದವರಿಗೆ ಆಹಾರ ನೀಡುವ ಕಿಚ್ಚನ ಕೈತುತ್ತು ಅಡಿಯಲ್ಲಿ ಕೆಲಸ ನಡೆಯುತ್ತಿದೆ. ನಿತ್ಯ 500ಕ್ಕೂ ಅಧಿಕ ಬಡವರಿಗೆ, ವಲಸಿಗರಿಗೆ ಕಾರ್ವಿುಕರಿಗೆ ಆಹಾರ ವಿತರಿಸಲಾಗುತ್ತಿದೆ. ಇದೀಗ ಚಿತ್ರೋದ್ಯಮದ ಹಲವು ಹಿರಿಯರ ಸ್ಥಿತಿಗತಿಯನ್ನು ವಿಚಾರಿಸಿದ್ದಾರೆ.

‘ಮೊದಲು ಮಾನವನಾಗು’ ಟ್ರಸ್ಟ್ ವತಿಯಿಂದ ವಿಶೇಷ ಕಿಟ್ ಜತೆಗೆ ಪತ್ರವೊಂದನ್ನೂ ರವಾನಿಸಿದ್ದಾರೆ. ಆ ಪತ್ರದಲ್ಲಿ ‘ನನ್ನ ಕುಟುಂಬದ ಹಿರಿಯರು ನೀವು. ನೀವೆಲ್ಲ ಹೇಗಿದ್ದೀರಿ?.. ಪ್ರೀತಿಯಿಂದ ಕಿಚ್ಚ ಸುದೀಪ್’ ಎಂದು ಬರೆಯಲಾಗಿದ್ದು, ಕಿಟ್ ಪಡೆದುಕೊಂಡವರೆಲ್ಲ ಸುದೀಪ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ಶಶಿಕಲಾ, ಸುದೀಪ್ ಅವರ ಈ ಕಾಳಜಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಇತ್ತೀಚಿನ ದಿನಗಳಲ್ಲಿ ಹಿರಿಯ ಕಲಾವಿದರನ್ನು ಕೇಳುವವರೇ ಇಲ್ಲ. ಈ ಸಮಯದಲ್ಲಿ ಅವರನ್ನು ನೆನಪುಮಾಡಿಕೊಂಡು ಕಿಟ್ ರವಾನಿಸಿ, ಹೇಗಿದ್ದೀರಿ ಎಂದು ಕೇಳುತ್ತಿದ್ದಾರಲ್ಲ. ನಿಜಕ್ಕೂ ಸುದೀಪ್ ಅವರ ಈ ಕಾಳಜಿಗೆ ನಮ್ಮ ಧನ್ಯವಾದ’ ಎಂದಿದ್ದಾರೆ. ಇನ್ನುಳಿದಂತೆ, ಹಿರಿಯ ನಟಿ ಗಿರಿಜಾ ಲೋಕೇಶ್, ಮೂಗು ಸುರೇಶ್, ಆರ್.ಟಿ ರಮಾ, ಉಮೇಶ್, ಸತ್ಯಜಿತ್, ಶಶಿಕಲಾ, ಅರವಿಂದ್ ಸೇರಿ ನೂರಾರು ಜನಕ್ಕೆ ಸ್ಪಂದನೆಯ ಪತ್ರವನ್ನು ಸುದೀಪ್ ರವಾನಿಸಿದ್ದಾರೆ.

‘90 ವರ್ಷಗಳಿಂದ ಯಾರೂ ಈ ಥರ ಮಾಡಿಲ್ಲ’: ಅಂದಹಾಗೆ, ಸ್ಯಾಂಡಲ್​ವುಡ್​ನ ಎಲ್ಲ ಹಿರಿಯ ಕಲಾವಿದರ ಪಟ್ಟಿ ಸಿದ್ಧಪಡಿಸಿಕೊಟ್ಟಿರುವುದು ಹಿರಿಯ ನಟ ಡಿಂಗ್ರಿ ನಾಗರಾಜ್. ‘ಕಳೆದ 90 ವರ್ಷದ ಕನ್ನಡ ಸಿನಿಮಾ ಇತಿಹಾಸದಲ್ಲಿ ಈ ರೀತಿ ಕಲಾವಿದರ ಪಟ್ಟಿ ಮಾಡಿ ಅವರ ಯೋಗಕ್ಷೇಮವನ್ನು ಯಾವೊಬ್ಬ ನಟರೂ ವಿಚಾರಿಸಿರಲಿಲ್ಲ. ಇದೀಗ ಆ ಕೆಲಸವನ್ನು ಸುದೀಪ್ ಮಾಡುತ್ತಿದ್ದಾರೆ. ಆರೋಗ್ಯ, ಹಣಕಾಸು ಇನ್ನೀತರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಸುದೀಪ್ ಅವರ ಈ ಕಾರ್ಯಕ್ಕೆ ನಮ್ಮ ಇಡೀ ಬಳಗದಿಂದ ತುಂಬು ಹೃದಯದ ಧನ್ಯವಾದ’ ಎಂದಿದ್ದಾರೆ ಡಿಂಗ್ರಿ ನಾಗರಾಜ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net