

ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಬಹುದಿನಗಳ ಬೇಡಿಕೆಯಾಗಿದ್ದ ಹೊಸ ಪಿಂಚಣಿ ಯೋಜನೆಗೆ (ಎನ್ಪಿಎಸ್) ಸಚಿವ ಡಾ.ಕೆ.ಸುಧಾಕರ್ ಹಸಿರು ನಿಶಾನೆ ತೋರಿದ್ದಾರೆ. ಸರ್ಕಾರಿ ವೈದ್ಯ, ದಂತ ವೈದ್ಯಕೀಯ ಕಾಲೇಜು, ಇವುಗಳಿಗೆ ಹೊಂದಿಕೊಂಡಿರುವ ಬೋಧಕ ಆಸ್ಪತ್ರೆಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಈ ಯೋಜನೆ ಲಾಭ ಪಡೆಯಲಿದ್ದಾರೆ.
ಕರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗೆ ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಎನ್ಪಿಎಸ್ ಯೋಜನೆ ಜಾರಿಗೊಳಿಸಿರುವ ಈ ತೀರ್ಮಾನ ಸಾರ್ಥಕಭಾವ ಮೂಡಿಸಿದೆ. | ಡಾ.ಕೆ.ಸುಧಾಕರ್ ವೈದ್ಯಕೀಯ ಶಿಕ್ಷಣ ಸಚಿವ
ಸಚಿವ ಡಾ.ಸುಧಾಕರ್ ಅಧಿಕಾರ ವಹಿಸಿಕೊಂಡ ಬಳಿಕ ಅವರನ್ನು ಭೇಟಿ ಮಾಡಿದ್ದ ಇಲಾಖೆಯ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಪಿಂಚಣಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಮನವಿ ಸ್ವೀಕರಿಸಿದ್ದ ಸಚಿವರು, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಬೇಡಿಕೆಗೆ ಅನುಮೋದನೆ ನೀಡುವಂತೆ ಸುಧಾಕರ್ ಅವರು ಸಿಎಂ ಯಡಿಯೂರಪ್ಪ ಭೇಟಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದ್ದು, ಅಧಿಕೃತ ಆದೇಶ ಹೊರಬಿದ್ದಿದೆ.
ಈ ಹಿಂದೆ ಬೋಧಕ ಸಿಬ್ಬಂದಿ ಬೇಡಿಕೆಯಾಗಿದ್ದ ಏಳನೇ ವೇತನ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ವೇತನ ಮತ್ತು ಭತ್ಯೆ ನೀಡುವ ಪ್ರಸ್ತಾವನೆಗೂ ಸಚಿವರು ಅನುಮೋದನೆ ದೊರಕಿಸಿಕೊಟ್ಟಿದ್ದರು. ಹಾಗೆಯೇ 5-6 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವೈದ್ಯ ವಿದ್ಯಾರ್ಥಿಗಳ ವೇತನ ಪ್ರಸ್ತಾವನೆಗೂ ಅನುಮತಿ ದೊರಕಿಸಿ, ಈಗಾಗಲೇ ಪರಿಷ್ಕೃತ ಶಿಷ್ಯ ವೇತನ ಆದೇಶ ಜಾರಿಯಾಗಿದೆ. ಇದೀಗ ಅನೇಕ ದಿನಗಳಿಂದ ಅನುಮತಿಗೆ ಕಾಯುತ್ತಿದ್ದ ಎನ್ಪಿಎಸ್ ಯೋಜನೆಗೂ ಮುಕ್ತಿ ದೊರಕಿದಂತಾಗಿದೆ.
5949 ಅಧಿಕಾರಿ- ಸಿಬ್ಬಂದಿಗೆ ಪ್ರಯೋಜನ : ಒಟ್ಟು 27 ಸಂಸ್ಥೆಗಳಲ್ಲಿ ಕಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿರುವ 5,949 ಅಧಿಕಾರಿ ಮತ್ತು ಸಿಬ್ಬಂದಿಗೆ ಯೋಜನೆ ಪ್ರಯೋಜನ ದೊರೆಯಲಿದೆ. ಇದರಲ್ಲಿ 2,061 ಮಂದಿ ಎಐಸಿಟಿಇ ಅನುಮೋದನೆ ಪಡೆದ ಹುದ್ದೆಗಳಾಗಿದ್ದರೆ, 3,888 ಎಐಸಿಟಿಇಯೇತರ ಹುದ್ದೆಗಳಾಗಿವೆ. ಈ ನೂತನ ಯೋಜನೆಯಿಂದ ಸರ್ಕಾರಕ್ಕೆ ಪ್ರತಿ ವರ್ಷ 77.27 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. 2006ರ ಏ.1ರ ನಂತರ ಕಾಯಂ ಆಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ವೃಂದದ ಅಧಿಕಾರಿ ಮತ್ತು ಸಿಬ್ಬಂದಿಗೆ ತಕ್ಷಣದಿಂದಲೇ ನೂತನ ಪಿಂಚಣಿ ಯೋಜನೆ ಜಾರಿಯಾಗಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.