ಈ 5 ವರ್ಷದ ಬಾಲಕ ಅಮ್ಮನ ಜೀವ ಉಳಿಸಿದ್ದು 'ಆಟಿಕೆ ಆ್ಯಂಬುಲೆನ್ಸ್​'ನಿಂದ; ಸಮಯಪ್ರಜ್ಞೆಗೆ ಶ್ಲಾಘನೆ

Boy
Published on

ಈ 5ವರ್ಷದ ಬಾಲಕನನ್ನು ನೆಟ್ಟಿಗರು ಸಿಕ್ಕಾಪಟೆ ಹೊಗಳುತ್ತಿದ್ದಾರೆ. ಪುಟ್ಟ ಹುಡುಗ ಸಮಯಪ್ರಜ್ಞೆಯಿಂದ ತನ್ನ ತಾಯಿಯ ಜೀವವನ್ನು ಉಳಿಸಿದ್ದಾನೆ. ಅಷ್ಟಕ್ಕೂ ಅವನೇನು ಮಾಡಿದ? ಹೇಗೆ ತನ್ನಮ್ಮನ ಜೀವ ಉಳಿಸಿದ ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಲಂಡನ್​​ನ ವೆಸ್ಟ್​ ಮರ್ಸಿಯಾ ಪೊಲೀಸ್​ ಫೇಸ್​​ಬುಕ್​​ನಲ್ಲಿ ಬಾಲಕನ ಬಗ್ಗೆ ಬರೆದುಕೊಂಡಿದ್ದಾರೆ. ಈ ಬಾಲಕನ ಹೆಸರು ಜೋಶ್​. ಅಂದು ಮನೆಯಲ್ಲಿ ಅಮ್ಮ ಮತ್ತು ಸಹೋದರನೊಂದಿಗೆ ಇದ್ದ. ಆಗ ಅವನ ಅಮ್ಮ ಇದ್ದಕ್ಕಿದ್ದಂತೆ ಎಚ್ಚರ ತಪ್ಪಿ ಬಿದ್ದುಹೋದರು. ಅಷ್ಟು ಪುಟ್ಟ ಬಾಲಕನಾದರೂ ತನ್ನ ಬುದ್ಧಿ ಉಪಯೋಗಿಸಿ ಕೂಡಲೇ 112 ಕ್ಕೆ ಕರೆ ಮಾಡಿದ. (ಯುರೋಪ್​​ನಲ್ಲಿ ಎಮರ್ಜನ್ಸಿ ಸರ್ವೀಸ್​ಗಾಗಿ ಇರುವ ಸಂಖ್ಯೆ 112) ಬಾಲಕನ ಮನೆಗೆ ಕೂಡಲೇ ದೌಡಾಯಿಸಿದ ಸಿಬ್ಬಂದಿ, ಅವನ ತಾಯಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಬಾಲಕ ತನ್ನ ಆಟದ ಆ್ಯಂಬುಲೆನ್ಸ್​ ಮೇಲೆ 112 ಎಂದು ಬರೆದಿದ್ದನ್ನು ನೋಡಿದ್ದ ಹೊರತು, ಆತನಿಗೆ ಅದು ನಿಜಕ್ಕೂ ಎಮರ್ಜನ್ಸಿ ಸರ್ವೀಸ್​ ನಂಬರ್​ ಎಂಬುದೆಲ್ಲ ಗೊತ್ತಿರಲಿಲ್ಲ. ಇದನ್ನೂ ಓದಿ: ತನ್ನ ಎರಡೂ ಕಿವಿಯನ್ನು ಕತ್ತರಿಸಿ, ಭದ್ರವಾಗಿ ಜಾರ್​​ನಲ್ಲಿ ಇಟ್ಟವನ ತಲೆಬುರುಡೆ ನೋಡಿ…!

ಅದೇನೇ ಇರಲಿ..ತನ್ನ ಆಟಿಕೆ ಆ್ಯಂಬುಲೆನ್ಸ್​ ಮೇಲೆ ಇದ್ದ ನಂಬರ್​ಗೆ ಕರೆ ಮಾಡಬೇಕು ಎಂದು ಆ ಐದುವರ್ಷದ ಮಗುವಿಗೆ ಅರ್ಥವಾಯಿತಲ್ಲ ಎಂಬುದೇ ದೊಡ್ಡ ಅಚ್ಚರಿ ಎಂದು ಪೊಲೀಸರು ಬರೆದುಕೊಂಡಿದ್ದಾರೆ.

ಈ ವಿಷಯವನ್ನು ಓದಿದ ನೆಟ್ಟಿಗರಂತೂ ಬಾಲಕನ ಶೌರ್ಯ, ಸಮಯಪ್ರಜ್ಞೆಯನ್ನು ಸಿಕ್ಕಾಪಟೆ ಕೊಂಡಾಡುತ್ತಿದ್ದಾರೆ. ಹೊಗಳಿ ಕಾಮೆಂಟ್​​ಗಳನ್ನು ಬರೆಯುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net