

ಬೆಲ್ಗ್ರೇಡ್: ವೃತ್ತಿಪರ ಟೆನಿಸ್ ಕ್ರೀಡೆಯ ಪುನರಾರಂಭಕ್ಕೆ ಬಹುದೊಡ್ಡ ಹಿನ್ನಡೆ ಎದುರಾಗಿದೆ. ವಿಶ್ವ ನಂ. 1 ಟೆನಿಸ್ ಆಟಗಾರ ನೊವಾಕ್ ಜೋಕೊವಿಕ್ ಕರೊನಾ ಸೋಂಕಿತರಾಗಿದ್ದಾರೆ. ಸೆರ್ಬಿಯಾ ಮತ್ತು ಕ್ರೊವೇಷಿಯಾದಲ್ಲಿ ತಾವೇ ಆಯೋಜಿಸಿದ್ದ ಪ್ರದರ್ಶನ ಟೆನಿಸ್ ಟೂರ್ನಿಯಲ್ಲಿ ಆಡಿದ ಕಾರಣ ಜೋಕೊವಿಕ್ಗೂ ಸೋಂಕು ಅಂಟಿಕೊಂಡಿದೆ. ಅವರು ಈ ಟೂರ್ನಿಯಿಂದಾಗಿ ಸೋಂಕಿತರಾದ 4ನೇ ವೃತ್ತಿಪರ ಟೆನಿಸ್ ಆಟಗಾರರಾಗಿದ್ದಾರೆ. 17 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ಜೋಕೊವಿಕ್ ಅವರ ಪತ್ನಿ ಜೆಲೆನಾಗೂ ಸೋಂಕು ದೃಢಪಟ್ಟಿದೆ.
‘ಬೆಲ್ಗ್ರೇಡ್ಗೆ ಮರಳಿದ ಬೆನ್ನಲ್ಲೇ ನಾನು ಪರೀಕ್ಷೆಗೆ ಒಳಗಾಗಿದ್ದೆ. ನನ್ನ ವರದಿ ಪಾಸಿಟಿವ್ ಬಂದಿದೆ. ಜತೆಗೆ ನನ್ನ ಪತ್ನಿ ಜೆಲೆನಾ ವರದಿಯೂ ಪಾಸಿಟಿವ್ ಬಂದಿದೆ. ಆದರೆ ಮಕ್ಕಳಿಬ್ಬರ ವರದಿ ನೆಗೆಟಿವ್ ಬಂದಿದೆ’ ಎಂದು 33 ವರ್ಷದ ಜೋಕೊವಿಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತೊಬ್ಬ ಟೆನಿಸ್ ಆಟಗಾರ, ಗರ್ಭಿಣಿ ಪತ್ನಿಗೆ ಕರೊನಾ
ನೊವಾಕ್ ಜೋಕೊವಿಕ್ ಆಯೋಜಿಸಿದ್ದ ಪ್ರದರ್ಶನ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಮತ್ತೋರ್ವ ಆಟಗಾರ ಮತ್ತು ಆತನ ಗರ್ಭಿಣಿ ಪತ್ನಿಗೂ ಸೋಂಕು ಇರುವುದು ಮಂಗಳವಾರ ಖಚಿತಗೊಂಡಿದ್ದು, ಮತ್ತಷ್ಟು ಆತಂಕ ಮತ್ತು ಜೋಕೊವಿಕ್ ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದೆ. ಸೆರ್ಬಿಯಾ ಆಟಗಾರ ವಿಕ್ಟರ್ ಟ್ರೋಯಿಕಿ ಮತ್ತು ಅವರ ಗರ್ಭಿಣಿ ಪತ್ನಿಗೂ ಕರೊನಾ ಪಾಸಿಟಿವ್ ವರದಿ ಬಂದಿದೆ. ಮಾಜಿ ಟಾಪ್ 20 ಆಟಗಾರ ಟ್ರೋಯಿಕಿ ಪ್ರದರ್ಶನ ಟೂರ್ನಿಯ 2ನೇ ಚರಣದಲ್ಲಿ ಜೋಕೊವಿಕ್ ವಿರುದ್ಧವೂ ಪಂದ್ಯವಾಡಿದ್ದರು.
ಇದನ್ನೂ ಓದಿ: ರೂಪವತಿಯರಾದ ಹಿರಿಯ ಕ್ರಿಕೆಟಿಗರು..!
ಇದಕ್ಕೆ ಮುನ್ನ ಪ್ರದರ್ಶನ ಟೂರ್ನಿಯಲ್ಲಿ ಆಡಿದ್ದ ವಿಶ್ವ ನಂ. 19 ಬಲ್ಗೇರಿಯಾ ಆಟಗಾರ ಗ್ರಿಗೋರ್ ಡಿಮಿಟ್ರೋವ್ಗೆ ಕರೊನಾ ಸೋಂಕು ದೃಢಪಟ್ಟಿತ್ತು. ಅದರ ಬೆನ್ನಲ್ಲೇ 2ನೇ ಚರಣದ ಟೂರ್ನಿಯ ಫೈನಲ್ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಟೂರ್ನಿಯಲ್ಲಿ ಡಿಮಿಟ್ರೋವ್ ವಿರುದ್ಧ ಆಡಿದ್ದ ವಿಶ್ವ ನಂ. 33 ಕ್ರೊವೇಷಿಯಾ ಆಟಗಾರ ಬೋರ್ನಾ ಕೋರಿಕ್ಗೆ ಲಕ್ಷಣಗಳಿಲ್ಲದಿದ್ದರೂ ಕರೊನಾ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿತ್ತು.
ಟೂರ್ನಿ ಆಯೋಜಿಸಿದ್ದ ಜೋಕೊವಿಕ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶವೂ ವ್ಯಕ್ತವಾಗಿತ್ತು. ಬೆಲ್ಗ್ರೇಡ್ ಚರಣದ ಟೂರ್ನಿಯಲ್ಲಿ 4 ಸಾವಿರ ಪ್ರೇಕ್ಷಕರೂ ಹಾಜರಾಗಿದ್ದರು. ಇನ್ನು ಟೂರ್ನಿಯ ವೇಳೆ ಯಾರೂ ಸಾಮಾಜಿಕ ಅಂತರವನ್ನು ಕಾಪಾಡಿರಲಿಲ್ಲ. ಸೆರ್ಬಿಯಾ ಸರ್ಕಾರದ ಕೆಲ ಮಾರ್ಗಸೂಚಿಗಳನ್ನೂ ಗಾಳಿಗೆ ತೂರಲಾಗಿತ್ತು. ಕಳೆದ ಮಾರ್ಚ್ನಿಂದ ಯಾವುದೇ ವೃತ್ತಿಪರ ಟೆನಿಸ್ ಟೂರ್ನಿ ನಡೆಯದಿರುವ ನಡುವೆ ಜೋಕೊವಿಕ್ ಸ್ವಯಂ ಈ ಪ್ರದರ್ಶನ ಟೂರ್ನಿ ಆಯೋಜಿಸಿದ್ದರು.
ಈ ನಡುವೆ ಜೋಕೊವಿಕ್ ನೈಟ್ಕ್ಲಬ್ನಲ್ಲಿ ಆಟಗಾರರ ಜತೆಗೆ ಪಾರ್ಟಿ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಆಸ್ಟ್ರಿಯಾದ ಡೊಮಿನಿಕ್ ಥೀಮ್ ಮತ್ತು ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ಕೂಡ ಟೂರ್ನಿಯಲ್ಲಿ ಆಡಿದ್ದಾರೆ. ಕರೊನಾ ಹಾವಳಿಯ ನಡುವೆ ಯುಎಸ್ ಓಪನ್ನಲ್ಲಿ ಆಡಲು ಹಿಂದೇಟು ಹಾಕುವ ಸೂಚನೆ ನೀಡಿದ್ದ ಜೋಕೊವಿಕ್, ಅದರ ನಡುವೆ ಈ ಎಡವಟ್ಟು ಮಾಡಿಕೊಂಡಿದ್ದಾರೆ. ಈ ಘಟನೆಯಿಂದಾಗಿ ಎಟಿಪಿ ಮತ್ತು ಡಬ್ಲ್ಯುಟಿಎ ಟೂರ್ನಿಗಳ ಪುನರಾರಂಭವೂ ವಿಳಂಬಗೊಳ್ಳಬಹುದು ಎನ್ನಲಾಗಿದೆ. ಸದ್ಯಕ್ಕೆ ಆಗಸ್ಟ್ನಲ್ಲಿ ವೃತ್ತಿಪರ ಟೆನಿಸ್ ಚಟುವಟಿಕೆ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ.