ಪಾಕಿಸ್ತಾನ ತಂಡದ ಮೂವರು ಕ್ರಿಕೆಟಿಗರಿಗೆ ಕರೊನಾ ಪಾಸಿಟಿವ್

pak cricket_web
Published on

ಕರಾಚಿ: ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಸಿದ್ಧವಾಗುತ್ತಿರುವ ಪಾಕಿಸ್ತಾನ ತಂಡದ ಮೂವರು ಕ್ರಿಕೆಟಿಗರಿಗೆ ಕರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಇರಾದೆಯಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಹಿನ್ನಡೆಯಾದಂತಾಗಿದೆ. ಶಾದಬ್ ಖಾನ್, ಹ್ಯಾರಿಸ್ ರ್ೌ ಹಾಗೂ ಹೈದರ್ ಅಲಿಗೆ ಭಾನುವಾರ ನಡೆಸಿದ ಕೋವಿಡ್-19ರ ಪರೀಕ್ಷೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ‘ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಮೂವರು ಆಟಗಾರರಿಗೆ ಕರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದ್ದು, ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ರಾವಲ್ಪಿಂಡಿಯಲ್ಲಿ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಕಟಣೆಯಲ್ಲಿ ತಿಳಿಸಿದೆ.

ಸೋಂಕಿತ ಮೂವರನ್ನು ತಕ್ಷಣವೇ ಸಂಪರ್ಕಿಸಿದ ಪಿಸಿಬಿ ವೈದ್ಯಕೀಯ ತಂಡ, ಕ್ವಾರಂಟೈನ್‌ಗೆ ಒಳಪಡಲು ಸೂಚಿಸಿತು. ಜೂನ್ 28 ರಂದು ಪಾಕಿಸ್ತಾನ ತಂಡ ಲಾಹೋರ್ ಮೂಲಕ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಬೇಕಿದೆ. ಪ್ರವಾಸದಲ್ಲಿ ಪಾಕಿಸ್ತಾನ ಆತಿಥೇಯ ಇಂಗ್ಲೆಂಡ್ ವಿರುದ್ಧ ತಲಾ 3 ಟೆಸ್ಟ್, ಟಿ20 ಪಂದ್ಯಗಳನ್ನಾಡಬೇಕಿದೆ. ಇಂಗ್ಲೆಂಡ್ ಪ್ರವಾಸಕ್ಕಾಗಿ ಪಿಸಿಬಿ 29 ಸದಸ್ಯರ ತಂಡ ಪ್ರಕಟಿಸಿದ್ದು, ಜತೆಗೆ ನಾಲ್ವರು ಮೀಸಲು ಆಟಗಾರರನ್ನು ಹೆಸರಿಸಿದೆ. ಇದಕ್ಕೂ ಮೊದಲು ಪಾಕಿಸ್ತಾನ ತಂಡ ಮಾಜಿ ನಾಯಕ ಶಾಹಿದ್ ಅಫ್ರಿದಿಗೂ ಕರೊನಾ ವೈರಸ್ ಸೋಂಕು ಕಾಣಿಸಿಕೊಂಡಿತ್ತು. ಅಫ್ರಿದಿ ಸದ್ಯ ಕರಾಚಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net