

ನಾನು ಪುಣೆ ಇನ್ಸ್ಟಿಟ್ಯೂಟ್ನಲ್ಲಿ ಕಲಿತೆ. ಅದು ಒಂದು ರೀತಿಯ ಶಿಸ್ತು ಕಲಿಸಿತು. ಆಗ ಕೊಟ್ಟಷ್ಟೇ ರೀಲಲ್ಲಿ ಸಿನಿಮಾ ತಯಾರಿಸಬೇಕಿತ್ತು. ಪಕ್ಕಾ ತಯಾರಿ ಮಾಡ್ಕೊಬೇಕಿತ್ತು. ಅಲ್ಲಿ ಹೋಗಿ ತಡಕಾಡುವಂತಿರಲಿಲ್ಲ. ನಂತರ ವೃತ್ತಿಜೀವನಕ್ಕೆ ಬಂದ ಮೇಲೂ ನಾನು ಮಾಡಿದ್ದೆಲ್ಲ ಕಡಿಮೆ ಬಜೆಟ್ ಸಿನಿಮಾಗಳಾದ್ದರಿಂದ ಸ್ವಲ್ಪ ಕರಾರುವಾಕ್ಕಾಗಿ ಇರಲೇಬೇಕಿತ್ತು. ಅಲ್ಲದೆ, ಸಿನಿಮಾ ಯಾವತ್ತಿಗೂ ಟೀಂ ವರ್ಕ್. ನಟರು, ಕ್ಯಾಮರಾಮನ್ ಎಲ್ಲರಿಗೂ ಡೀಟೇಲ್ ಇದ್ದಷ್ಟೂ ಪಕ್ಕಾ ಗೊತ್ತಿರುತ್ತೆ. ಇದು ನನ್ನ ಕ್ರಮ. ಇದೇ ಸರಿ ಅನ್ನುವುದಿಲ್ಲ. ಆಶುನಿರ್ದೇಶಕರೂ ಇರಬಹುದು.
-ಇನ್ನೊಬ್ಬರ ಪರವಾಗಿ ಮಾತಾಡಲಾರೆ. ನನ್ನ ಬಗ್ಗೆ ಮಾತಾಡ್ತೀನಿ. ನನಗೆ ಪುಣೆ ಇನ್ಸ್ಟಿಟ್ಯೂಟ್ ಬಹಳ ಕಲಿಸ್ತು. ನಾನೊಬ್ಬ ಸೈನ್ಸ್ ವಿದ್ಯಾರ್ಥಿ. ಸಿನಿಮಾಗೆ ಬಂದೆ. ಅಲ್ಲಿ ಶಿಸ್ತು ಮಾತ್ರ ಅಲ್ಲ, ಕಲೆಯ ಉದ್ದೇಶ, ಸ್ಟ್ರಕ್ಚರ್, ಏಸ್ತೆಟಿಕ್, ಸಿನಿಮಾ ಫಿಲಾಸಫಿ ಎಲ್ಲಾ ಕಲಿತೆ. ನನಗೆ ಎಷ್ಟೋ ಸಲ ಅನಿಸೋದು, ಸ್ವಲ್ಪ ಟ್ರೖೆನಿಂಗ್ ಇದ್ದಿದ್ರೆ ನಮ್ಮ ಕನ್ನಡದ ಎಷ್ಟೋ ನಿರ್ದೇಶಕರ ಸಿನಿಮಾಗಳು ಇನ್ನಷ್ಟು ಚೆನ್ನಾಗಾಗ್ತಿದ್ವೇನೋ ಅಂತ. ಬಹಳ ಜನರಿಗೆ ಸಿನಿಮಾದ ಟೆಕ್ನಿಕ್ ಗೊತ್ತಿರತ್ತೆ. ಫಿಲಾಸಫಿ ಅಲ್ಲ. ಟೆಕ್ನಿಕ್ ಕ್ಯಾಮೆರಾಮನ್ಗೂ ಗೊತ್ತಿರುತ್ತೆ. ನಿರ್ದೇಶಕನಿಗೆ ವಿಜನ್ ಇರಬೇಕು. ಫಿಲಾಸಫಿ ಗೊತ್ತಿರ್ಬೆಕು. ಏಸ್ತೆಟಿಕ್ಸ್ ಬೇಕಾ ಅನ್ನೋರಿದ್ದಾರೆ. ಸಿನಿಮಾದ ಗ್ರಾಮರ್ ಗೊತ್ತಿದ್ದು ಅದನ್ನು ಮುರಿಯೋದಕ್ಕೂ, ಗೊತ್ತಿಲ್ಲದೇ ಮುರಿಯೋದಕ್ಕೂ ವ್ಯತ್ಯಾಸ ಇದೆ.
-ಕ್ರಾಂತಿ ಖಂಡಿತಾ ಆಗಲ್ಲ. ಕಲೆ ಕ್ರಾಂತಿ ಮಾಡಿಸುವುದಿಲ್ಲ, ನಿಮ್ಮ ಅರಿವನ್ನು ಹೆಚ್ಚಿಸುತ್ತೆ. ಒಂದ್ಯಾವುದೋ ಉದ್ವೇಗಕಾರಿ ಭಾಷಣ ಸಮೂಹವೆಲ್ಲ ಒಟ್ಟಿಗೇ ಜೈ ಅಂದು ಒಂದೇ ತರ ಯೋಚಿಸುವ ಹಾಗೆ ಮಾಡಬಹುದು. ಕಲೆ ಹಾಗಲ್ಲ, ಒಂದೊಳ್ಳೆಯ ಕತೆ, ಒಂದೊಳ್ಳೆಯ ಸಿನಿಮಾ ಪ್ರತಿಯೊಬ್ಬರನ್ನೂ ಸ್ವತಂತ್ರವಾಗಿ ಯೋಚಿಸೋ ಹಾಗೆ ಮಾಡುತ್ತೆ. ‘ತಬರನ ಕತೆ’ಯಲ್ಲಿ ಅವನು ಕ್ರಾಂತಿ ಮಾಡಲ್ಲ. ಅಸಹಾಯಕತೆ ನಮ್ಮನ್ನು ಯೋಚಿಸೋ ಹಾಗೆ ಮಾಡುತ್ತೆ. ಅಲ್ಲದೆ, ನಾವೇ ನೋಡೋರನ್ನು ಬಹಳ ಅಂಡರ್ಎಸ್ಟಿಮೇಟ್ ಮಾಡ್ತೀವಿ. ಅರ್ಥವಾಗಲ್ಲ ಅಂತ. ನನ್ ಸಿನಿಮಾ ಹಳ್ಳಿ ಹಳ್ಳಿಲಿ ತೋರ್ಸಿದೀನಿ. ಜನ ಮೆಚ್ಚಿದಾರೆ. ಸಮಸ್ಯೆ ಸಿನಿಮಾದ್ದೂ ಅಲ್ಲ, ನೋಡೋರದೂ ಅಲ್ಲ, ಇಬ್ಬರ ನಡುವೆ ಪ್ರದರ್ಶನದ ಕೊಂಡಿ ಇಲ್ಲದಿರೋದು. ಗಂಭೀರ ವಿಷಯಗಳು ಯಾರಿಗೂ ಬೇಕಾಗಿಲ್ಲ. ವ್ಯಾವಹಾರಿಕ ಜಗತ್ತು ಸಂಖ್ಯಾಬಲದ ಬಗ್ಗೆ ಯೋಚಿಸುತ್ತೆ.
-ತಪ್ಪಿಲ್ಲ. ಬಹುಶಃ ಅದು ಯಾವಾಗಲೂ ಹಾಗೇ, ಇಲ್ಲಿ ಮಾತ್ರ ಅಲ್ಲ, ಜಗತ್ತಿನಾದ್ಯಂತ ಇರುವುದೇ ಹೀಗೆ. ಯಾವ ಕಾಲಕ್ಕೂ ಒಬ್ಬ ರಾಜಕಾರಣಿಗೋ ಮತ್ಯಾರ ಮಾತಿಗೋ ಇರೋ ಸಂಖ್ಯಾಬಲ ಒಬ್ಬ ಫಿಲಾಸಫರ್ಗೆ ಇರಲ್ಲ. ಕೆ.ವಿ. ಸುಬ್ಬಣ್ಣನವರು ಹೇಳ್ತಿದ್ದ ಹಾಗೆ ಯಾವತ್ತಿಗೂ ಪ್ರವಾಹದ ವಿರುದ್ಧ ಈಜುವವರನ್ನು ಜಗತ್ತು ನೆನಪಿಟ್ಕೊಳ್ಳತ್ತೆ. ಇದು ಈ ತರಹದ ಸಿನಿಮಾಗಳಿಂದಾನೇ ಆಗುತ್ತೆ ಅಂತಲ್ಲ, ಎಲ್ಲಾ ಒಳ್ಳೆ ಸಿನಿಮಾದಿಂದ್ಲೂ ಆಗುತ್ತೆ. ನಾವು ಪ್ಯಾಪುಲರ್ ಸಿನಿಮಾ ಮಾಡ್ತೀವಿ. ಪೊಲಿಟಿಕಲ್ ಅಲ್ಲ ಅಂತಾರಲ್ಲಾ, ಪಾಲಿಟಿಕ್ಸ್ ಇಲ್ಲದ ಸಿನಿಮಾನೇ ಇಲ್ಲ.
-ಉದಾಹರಣೆಗೆ, ಒಬ್ಬ ಮಗ, ಒಬ್ಬ ಹೆಂಡತಿ, ಸೊಸೆ ಹೀಗೇ ವರ್ತಿಸಬೇಕು ಅನ್ನೋ ಆಲೋಚನಾ ಪರಂಪರೆಯನ್ನು ಸಿನಿಮಾದಲ್ಲಿ ತರ್ತೀವಿ. ಅಲ್ಲಿ ಕಲ್ಚರಲ್ ಪಾಲಿಟಿಕ್ಸ್, ಜೆಂಡರ್ ಪಾಲಿಟಿಕ್ಸ್ ಇರುತ್ತೆ. ನಗರದವನು ಜಾಣ, ಹಳ್ಳಿಯವನು ಪೆದ್ದ ಅಂತ ತೋರಿಸೋದ್ರಲ್ಲೂ, ತೀರ್ಥ, ಪ್ರಸಾದ ಕೊಡೋನು ಜನಿವಾರ ಹಾಕಿರಲೇಬೇಕು ಅಂತ ತೋರಿಸೋದ್ರಲ್ಲೂ ಒಂಥರಾ ರಾಜಕೀಯತೆ ಇದೆ. ಬಹಳ ಸಲ ಅದು ಮಾಡಿದವರಿಗೆ ಉದ್ದೇಶ ಇಲ್ದೇ ಅವರಿಗೇ ಈ ರಾಜಕೀಯತೆ ಅರ್ಥ ಆಗದೆಯೂ ಮಾಡಿರ್ತಾರೆ.
-ಹಾಗೇನಿಲ್ಲ, ಇವತ್ತಿಗೆ ಸಣ್ಣ ಸಣ್ಣ ರಾಜ್ಯ, ಭಾಷೆಗಳಿಂದ ಕೂಡ ಒಳ್ಳೊಳ್ಳೆ ಸಿನಿಮಾಗಳು ಬರ್ತಿವೆ. ಅಲ್ಲದೆ, ಕನ್ನಡದಲ್ಲಿ ಎಷ್ಟೆಲ್ಲ ಒಳ್ಳೆ ಸಿನಿಮಾ ಬರ್ತಿವೆ. ಯಾವ್ಯಾವೋ ದೇಶಗಳಲ್ಲಿ ಜನ ಅವನ್ನು ನೋಡ್ತಿದ್ದಾರೆ. ಆದರೆ, ಅವು ನನಗೇ ನೋಡೋಕೆ ಸಿಕ್ಕಿರಲ್ಲ, ಆ ನಿರ್ದೇಶಕರು ಕಂಡಾಗ ಯಾವಾಗ ತೋರಿಸ್ತೀರಿ ಅಂತ ನಾನೇ ಕೇಳ್ತೀನಿ.
-ಫಿಲ್ಮ್ ಸೊಸೈಟಿ ಅಂತ ಇತ್ತು. ಆಗ ಇದು ಆಗ್ತಾ ಇತ್ತು. ಡಿಸ್ಟ್ರಿಬ್ಯೂಷನ್ ನೆಟ್ವರ್ಕ್ಗೆ ಪರ್ಯಾಯವಾಗಿ ಅದು ಇತ್ತು. ಈಗ ಅದಿಲ್ಲ. ಅಮೆರಿಕದಲ್ಲಿರೋ ಹಾಗೆ ಯೂನಿವರ್ಸಿಟಿ ಸರ್ಕ್ಯೂಟ್ ಸಹ ಇಲ್ಲ. ಆದರೆ, ಸರ್ಕಾರಿ ವಾಹಿನಿಯಲ್ಲಿ ಪ್ರತಿ ವಾರ ಇಂತಹ ಸಿನಿಮಾಗಳು ಬರ್ತಿದ್ವು, ಅದೂ ಇಲ್ಲ. ಫಿಲ್ಮ್ ಫೆಸ್ಟಿವಲ್ ಒಂದು ಇದೆ ಈಗ.
-ಅದೂ ವ್ಯಾಪಾರವೇ ಆದ್ದರಿಂದ ಅಲ್ಲಿಯೂ ಪಾಪ್ಯುಲರ್ ಸಿನಿಮಾಗಳೇ ಹೆಚ್ಚು. ಆದರೆ, ಜಗತ್ತಿನ ಯಾವ್ಯಾವೋ ಅಪರೂಪದ ಕೆಲ ಸಿನಿಮಾಗಳು ಯೂಟ್ಯೂಬ್ ಮೂಲಕ ಸಿಕ್ತವೆ, ಅಷ್ಟು ಅನುಕೂಲ ಆಗಿದೆ. ಇದು ಸಿನಿಮಾಗೆ ಮಾತ್ರವಲ್ಲ, ಎಲ್ಲ ರಂಗಗಳಲ್ಲೂ ಇದೆ. ಹತ್ತಾರು ಪ್ರಕಟಣೆಗಳು ಕಂಡ ಎಷ್ಟೋ ಪುಸ್ತಕಗಳು, ಒಳ್ಳೆಯ ಕೃತಿಗಳು ಅಂತ ಹೇಳೋಕಾಗಲ್ಲ. ಆದರೆ, ಡಿಜಿ ಟಲ್ ಲಭ್ಯತೆಯಿಂದಾಗಿ ಹಳೆಯ ಮೌಲಿಕ ಕೃತಿಗಳನ್ನು ಹುಡುಕಿ ನೋಡೋರಿಗೆ ಅನುಕೂಲ ಆಗ್ತಿದೆ.
-ಬೇರೆಯವ್ರು ಬರೆದಾಗ ಹೊಸ ಹೊಳಹು ಸಿಗುತ್ತೆ ನನಗೆ. ನನ್ನ ಸಿನಿಮಾಗಳಲ್ಲಿ ಕಾದಂಬರಿಗಳನ್ನು ಸಾಕಷ್ಟು ಬದಲಿಸಿದೀನಿ. ಆದರೆ, ಕನ್ನಡ ಸಾಹಿತಿಗಳ ಔದಾರ್ಯ ದೊಡ್ಡದು. ಭೈರಪ್ಪ, ಅನಂತಮೂರ್ತಿ ಎಲ್ರೂ ಸಿನಿಮಾ ಆಗಿ ಅದರ ಇಂಟರ್ಪ್ರಿಟೇಷನ್ ಭಿನ್ನವಾಗಿದೆ ಅನ್ನೋದನ್ನ ಒಪ್ಪಿದ್ರು. ತಕರಾರು ಮಾಡಲಿಲ್ಲ. ಸಾಹಿತ್ಯ ಹೇಳಿದ್ದನ್ನೇ ಸಿನಿಮಾ ಮಾಡೋದಾದ್ರೆ ಸಿನಿಮಾ ಯಾಕೆ ಮಾಡಬೇಕು? ರಿಕ್ರಿಯೇಷನ್ ಅಲ್ಲ, ರಿ-ಇಂಟರ್ಪ್ರಿಟೇಷನ್ ಆಗಬೇಕು. ಕುರೋಸೋವಾ ಶೇಕ್ಸ್ಪಿಯರನ್ನೇ ಬದಲಿಸಿದ್ದಾನೆ.
-ಯಾಕಂದ್ರೆ ನಾನು ಮಠ ಕಟ್ಟೋನಲ್ಲ... ಹಹ್ಹಹ್ಹ, ಹಾಗೇನಿಲ್ಲ, ಮುಖ್ಯವಾಗಿ ಗಂಭೀರ ಸಿನಿಮಾಗಳ ಬಗ್ಗೆ ಒಟ್ಟಾರೆ ಅಸಡ್ಡೆ, ಅವಜ್ಞೆ, ಕುತ್ಸಿತ ಮನೋಭಾವದಿಂದ ಮಾತಾಡೋದಿದೆ. ನಾನಾಗಿ ಏನೂ ಹೇಳಲ್ಲ, ಯಾರಾದರೂ ಬಂದರೆ ಖಂಡಿತವಾಗಿ ಹೇಳಿಕೊಡ್ತೀನಿ. ಎಷ್ಟೋ ಸಿನಿಮಾ ಶಾಲೆಗಳಲ್ಲಿ ಕರೆದಾಗೆಲ್ಲ ಹೋಗಿ ಪಾಠ ಮಾಡ್ತೀನಿ.
-ಅಂತಹ ಅವಕಾಶ ನನಗೆ ವಿದ್ಯಾರ್ಥಿಯಾಗಿದ್ದಾಗಲೇ ಬಂದಿತ್ತು. ಬೇರೆ ರಾಜ್ಯ, ದೇಶಗಳಿಂದ ಬಂತು. ಆದರೆ, ನನಗೆ ಗೊತ್ತಿರದ ಭಾಷೆ, ನೆಲದಲ್ಲಿ ಕತೆ ದೃಶ್ಯಗಳಿಗೆ ಬೇಕಾದ ಕಲ್ಚರಲ್ ಡೀಟೇಲಿಂಗ್ ನಿರ್ವಹಿಸೋದು ಸಾಧ್ಯವಿಲ್ಲ. ಇಲ್ಲಿಯೇ ಎಷ್ಟೋ ವಿವರಗಳು ನಮಗೆ ಗೊತ್ತಿರಲ್ಲ.
-ಒಬ್ಬ ಪ್ರಜೆಯಾಗಿ ಹಾಗೆ ನೇರ ಹೇಳಿಕೆ ಕೊಡೋ ನಟರು, ಸಾಹಿತಿಗಳ ಬಗ್ಗೆ ನನಗೆ ಗೌರವ ಇದೆ. ಅದೇ ಕೃತಿಯಲ್ಲಿ ಬಂದಾಗ ಪರ-ವಿರೋಧ ಎರಡನ್ನೂ ಅವರೇ ನಿರ್ವಹಿಸಬೇಕಾಗುತ್ತೆ. ಆಗ ಅದು ಬೇರೆಯಾಗುತ್ತೆ. ವೈಯಕ್ತಿಕ ಧ್ಯೇಯಗಳ ಜತೆ ಪಾತ್ರಕ್ಕೊಂದು ಧೋರಣೆ ಇರುತ್ತಲ್ಲ?
-ಅದು ಒಳ್ಳೆಯ ಕೃತಿಯಲ್ಲ, ಒಳ್ಳೆ ಸಿನಿಮಾ ಅಲ್ಲ.
-ಸಿನಿಮಾದ ಉದ್ದೇಶ ಎಂಟರ್ಟೇನ್ವೆುಂಟ್ ಅನ್ನೋದನ್ನೇ ನಾನು ಒಪ್ಪಲ್ಲ. ಸಿನಿಮಾ ನೋಡಬೇಕಾದ್ದು ಬದುಕಿನ ಜಂಜಾಟದಿಂದ ತಪ್ಪಿಸ್ಕೊಂಡು ಓಡಿ ಹೋಗೋಕಲ್ಲ, ಬದುಕನ್ನು ಅರ್ಥ ಮಾಡ್ಕೋಳೋಕೆ. ಅದು ಎಂಟರ್ಟೇನ್ಮೆಂಟಲ್ಲ, ಎನ್ಲೈಟನ್ಮೆಂಟ್ (ಜ್ಞಾನೋದಯ) ಆಗಬೇಕು. ಇದು ಒಂದು ರೀತಿ ಹೇರಲಾದ ಗ್ರಹಿಕೆ. ಅನೇಕ ದೇಶಗಳಲ್ಲಿ ಪ್ರಭುತ್ವವನ್ನು ಪ್ರಶ್ನೆ ಮಾಡದಿರುವಂತೆ ಮಾಡಲು ಹೀಗೆ ಮಾಡಲಾಗಿರುತ್ತೆ. ಸಕಲ ಸಮೃದ್ಧಿ ಇದೆ. ಆದರೆ, ಸರ್ಕಾರದ ವಿರುದ್ಧ ಮಾತಾಡುವ ಹಾಗಿರಲ್ಲ.
-ನಾನು ಸಿನಿಮಾಗೆ ಅಂತ ಒಂದು ಮನೆ ನೋಡಿಬಂದಿದ್ದೆ. ಶೂಟಿಂಗ್ ದಿನ ಹೋಗಿ ನೋಡಿದರೆ ಅವರು ಖುಷಿಗೆ ಸುಣ್ಣ ಬಣ್ಣ ಹೊಡೆಸಿ ಚೆನ್ನಾಗಿ ಮಾಡಿಟ್ಟಿದ್ರು. ಇದೇ ಮನೇನಾ ಅನ್ನೋ ಹಾಗಾಗಿತ್ತು. ಕಡೆಗೆ ವಾಪಸ್ ಬಂದ್ವಿ, ಅವರಿಗೆ ಸ್ವಲ್ಪ ಬೇಜಾರಾಯ್ತು. ಗುಲಾಬಿ ಟಾಕೀಸ್ ಮಾಡುವಾಗ ಸಮುದ್ರ ತೀರದಲ್ಲಿ ಗುಡಿಸಲು ಕಟ್ಟೋಕೆ ಒಂದ್ ಜಾಗ ನೋಡ್ತಾ ಇದ್ವಿ. ಯಾರೋ ಬಂದು ‘ಸರ್ ಎಲ್ರೂ ಶೂಟಿಂಗ್ ಮಾಡೋದು ಬೆಟ್ಟದಲ್ಲಿ, ಇಲ್ಲಲ್ಲ. ಅಲ್ಲಿ ಚೆನ್ನಾಗಿದೆ ಹೋಗಿ’ ಅಂದ್ರು. ಆಮೇಲೆ ನಾವು ‘ನಮಗಿದೇ ಜಾಗ ಬೇಕಪ್ಪ’ ಅಂದ್ವಿ. ಇನ್ನು ನನ್ನನ್ನು ನಾನು ಅಂತ ಬಿಟ್ಟು ಬೇರೆಲ್ಲಾ ಆಗಿ ಗುರುತಿಸ್ತಾರೆ. ಅನಂತಮೂರ್ತಿ, ನಾಗತಿಹಳ್ಳಿ, ಟಿ.ಎನ್. ಸೀತಾರಾಮ್ ಅಂತ ಗುರುತಿಸ್ತಾರೆ. ವೈಶಾಲಿ ಕಾಸರವಳ್ಳಿ ಗಂಡ ಅನ್ನೋರೂ ಇದಾರೆ.