ಮಂಟಪ ಗ್ರಾಮದ ಸುತ್ತಮುತ್ತ ಭಾರಿ ಶಬ್ದ: ಆತಂಕ ನಿವಾರಣೆಗೆ ಮುಂದಾಗುತ್ತಿಲ್ಲ ಸರ್ಕಾರ!

Noise
Published on

ಬೆಂಗಳೂರು: ಬನ್ನೇರುಘಟ್ಟ ಅರಣ್ಯ ಸುತ್ತಮುತ್ತ ಕೈಗಾರಿಕೆಗಳು ವ್ಯಾಪಕವಾಗಿದ್ದು, ಶಬ್ದಮಾಲಿನ್ಯ ಮತ್ತು ವಾಯುಮಾಲಿನ್ಯದಿಂದ ಪ್ರಾಣಿ ಪಕ್ಷಿಗಳ ಜೀವ ಸಂಕುಲಕ್ಕೆ ಗಂಡಾಂತರ ಬಂದೊದಗಿದೆ.

ಮಂಟಪ ಮತ್ತು ಬೇಗಿಹಳ್ಳಿ ಬಳಿ ಇರುವ ಫ್ಯಾಕ್ಟರಿಗಳಿಂದ ಹೆಚ್ಚು ಮಾಲಿನ್ಯ ಉಂಟಾಗುತ್ತಿದೆ. ಈ ಭಾಗದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಪಕ್ಷಿಗಳಿಗೂ ಸಂಕಷ್ಟ ಎದುರಾಗಿದೆ. ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೆಗಳಿಂದಾಗಿ ಬೇಗಿಹಳ್ಳಿ ಕೆರೆ ಕಲುಷಿತವಾಗುವ ಹಂತ ತಲುಪಿದೆ. ಶಬ್ದ ಮತ್ತು ವಾಯು ಮಾಲಿನ್ಯದಿಂದ ರೋಸಿ ಹೋಗಿರುವ ಸ್ಥಳೀಯರು ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.

ನಿಯಮ ಉಲ್ಲಂಘನೆ: ಜನವಸತಿ ಪ್ರದೇಶ ಮತ್ತು ಕಾಡಿನ ಅಂಚಿನಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ. ಸ್ಥಳ ಪರಿಶೀಲನೆ ಮಾಡದೆ ಮತ್ತು ವಾಸ್ತವ ಅರಿಯದೆ ಶಿಫಾರಸುಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ ಎನ್ನುವ ದೂರುಗಳು ವ್ಯಾಪಕವಾಗಿವೆ. ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿಗಳಿಂದ ಹಿಡಿದು, ಗ್ರಾನೈಟ್ ಫ್ಯಾಕ್ಟರಿಗಳ ತನಕ ಸಾಲುಸಾಲು ಫ್ಯಾಕ್ಟರಿಗಳ ಮಾಲೀಕರು ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ಕೂಡ ಗಮನಹರಿಸದಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ರಾತ್ರಿ ಹೊತ್ತು ನಿದ್ರೆ ಮಾಡುವುದೂ ಕಷ್ಟ: ರಾತ್ರಿ ಹೊತ್ತು ನಿದ್ರೆ ಮಾಡುವುದು ಕೂಡ ಕಷ್ಟವಾಗಿದೆ. ಫ್ಯಾಕ್ಟರಿಗಳಿಂದ ದೊಡ್ಡ ಪ್ರಮಾಣದಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಪ್ರತಿಭಟನೆಗೆ ಇಳಿಯುವ ಕಾಲ ದೂರವಿಲ್ಲ. ಈಗಲಾದರೂ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net